Janataa24 NEWS DESK

ಮಧುಗಿರಿ: ತಾಲ್ಲೂಕಿನ ವಸತಿ ಶಾಲೆಯ ಹಾಸ್ಟೆಲ್ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಪ್ರಕರಣದ ಸಂಬಂಧ ವಸತಿ ನಿಲಯದ ಮಹಿಳಾ ವಾರ್ಡನ್ನನ್ನು ಬುಧವಾರ ಅಮಾನತು ಗೊಳಿಸಲಾಗಿದೆ.
‘ಹಾಸ್ಟೆಲ್ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದರೂ ಅದನ್ನು ಗಮನಿಸದೆ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ವಾರ್ಡನ್ ಅಮಾನತು ಮಾಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು ಆದೇಶದಲ್ಲಿ ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯ ವಸತಿ ಶಾಲೆಯಲ್ಲಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಲಕಿ ಹೊಟ್ಟೆ ನೋವು ಎಂದು ಊರಿಗೆ ಮರಳಿದ್ದಳು. ನೋವು ಹೆಚ್ಚಾಗಿದ್ದರಿಂದ ಪೋಷಕರು ಆಕೆಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು.
ಹೊಟ್ಟೆನೋವು ಎಂದ ಕಾರಣ ಬಾಲಕಿಯ ಸ್ಕ್ಯಾನಿಂಗ್ ಹಾಗೂ ಇತರ ವೈದ್ಯಕೀಯ ಪರೀಕ್ಷೆ ಮಾಡಿದಾಗ ಏಳು ತಿಂಗಳು ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ವೈದ್ಯರು ಮಂಗಳವಾರ ಶಸ್ತ್ರಚಿಕಿತ್ಸೆಯ ಮೂಲಕ ಮಗುವನ್ನು ಹೊರತೆಗೆದಿದ್ದರು. ಈ ಬಗ್ಗೆ ವೈದ್ಯರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದ ಬಾಲಕಿಯನ್ನು ಈ ಕುರಿತು ಪ್ರಶ್ನಿಸಿದಾಗ ವಸತಿ ಶಾಲೆಯ ಬಳಿಯ ಯುವಕನೊಬ್ಬನೊಂದಿಗೆ ದೈಹಿಕ ಸಂಪರ್ಕ ಹೊಂದಿರುವುದಾಗಿ ತಿಳಿಸಿದ್ದಾಳೆ.
ವರದಿ
ಮಧುಗಿರಿ: ಅಬಿದ್