JANATAA24 NEWS DESK
CN Halli: ಅರಣ್ಯದಲ್ಲಿ ಸಿಲುಕಿದ 17 ಕುಟುಂಬಗಳು- ಮೂಲಭೂತ ಸೌಕರ್ಯಗಳಿಲ್ಲದೆ ಸಂಕಷ್ಟ ಜೀವನ.

ಚಿಕ್ಕನಾಯಕನಹಳ್ಳಿ: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೊನ್ನೆಭಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಬ್ಬೆಘಟ್ಟ ಸರ್ವೆ ನಂ.122ರಲ್ಲಿ ವಾಸಿಸುತ್ತಿರುವ ಅಲೆಮಾರಿ ಸಮುದಾಯದ 17 ಕುಟುಂಬಗಳು ಹಲವು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೆ ಮಾನವೀಯ ಸಂಕಷ್ಟದಲ್ಲಿ ಬದುಕುತ್ತಿದ್ದಾರೆ.
ಸ್ವಾತಂತ್ರ್ಯ ಬಂದು 79 ವರ್ಷಗಳಾದರೂ ಈ ಕುಟುಂಬಗಳಿಗೆ ಇನ್ನೂ ನಿವೇಶನ ಹಕ್ಕುಪತ್ರ, ವಸತಿ, ಕುಡಿಯುವ ನೀರು, ರಸ್ತೆ, ವಿದ್ಯುತ್, ಶೌಚಾಲಯ ಸೇರಿದಂತೆ ಯಾವುದೇ ಸೌಲಭ್ಯಗಳು ಲಭ್ಯವಾಗಿಲ್ಲ. ಆಡಳಿತವು ಈ ಪ್ರದೇಶವನ್ನು ಗ್ರಾಮ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿಗೆ ಸೇರಿಸದೇ ನಿರ್ಲಕ್ಷ್ಯ ತೋರಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಇದಲ್ಲದೆ, 90 ವರ್ಷದ ಗೌರಮ್ಮ ಮತ್ತು 85 ವರ್ಷದ ಗಂಗಮ್ಮ ಅವರಿಗೆ ವೃದ್ಧಾಪ್ಯ ವೇತನ ಸೇರಿದಂತೆ ಯಾವುದೇ ಸರ್ಕಾರಿ ಸೌಲಭ್ಯಗಳು ಸಿಕ್ಕಿಲ್ಲ. ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳಂತಹ ಮೂಲ ದಾಖಲೆಗಳನ್ನೂ ನೀಡಲಾಗಿಲ್ಲ.
ಪ್ರದೇಶದಲ್ಲಿ ಸುಮಾರು 15 ರಿಂದ 20 ಮಕ್ಕಳು ಪ್ರತಿದಿನ 4 ಕಿಲೋಮೀಟರ್ ನಡೆದುಕೊಂಡು ಅಂಗನವಾಡಿ ಮತ್ತು ಶಾಲೆಗೆ ತೆರಳಬೇಕಾದ ಅನಿವಾರ್ಯತೆಯಿದೆ. ರಸ್ತೆ ಇಲ್ಲದ ಕಾರಣದಿಂದ ಯಾವುದೇ ವಾಹನಗಳು, ತುರ್ತು ಆಂಬುಲೆನ್ಸ್ ಸೇವೆಗಳು ಕೂಡ ಇಲ್ಲಿ ತಲುಪುವುದಿಲ್ಲ. ಗರ್ಭಿಣಿಯರು ಹಾಗೂ ಹಿರಿಯ ನಾಗರಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಅರಣ್ಯ ಪ್ರದೇಶವಾಗಿರುವುದರಿಂದ ಕಾಡುಪ್ರಾಣಿಗಳ ಭೀತಿಯಲ್ಲಿಯೇ ಜನರು ದಿನನಿತ್ಯ ಜೀವನ ಸಾಗಿಸುತ್ತಿದ್ದಾರೆ. ಈ ಪರಿಸ್ಥಿತಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.
ಈ ಸಂದರ್ಭದಲ್ಲಿ ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ (ರಿ) ವತಿಯಿಂದ ಅಂಬೇಡ್ಕರ್ ಜಯಂತಿ ಅಂಗವಾಗಿ ಈ ಪ್ರದೇಶಕ್ಕೆ ಭೇಟಿ ನೀಡಿ ಸಿಹಿ ಮತ್ತು ಪುಸ್ತಕಗಳನ್ನು ಹಂಚಿ ಜನರ ಸಮಸ್ಯೆಗಳನ್ನು ಆಲಿಸಲಾಯಿತು. ಟ್ರಸ್ಟ್ ಅಧ್ಯಕ್ಷ ತೇಜಾ ಡಿ.ಎಸ್., ಕಾರ್ಯದರ್ಶಿ ಶಾಂತರಾಜು ಮತ್ತು ಸದಸ್ಯ ಗುರುಮೂರ್ತಿ ಅವರು ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಭರವಸೆ ನೀಡಿದರು.
“ಈ 17 ಕುಟುಂಬಗಳನ್ನು ಅನೇಕ ವರ್ಷಗಳಿಂದ ಆಡಳಿತವು ಯಾವುದೇ ಪಂಚಾಯಿತಿಗೆ ಸೇರಿಸದೆ ತ್ರಿಶಂಕು ಸ್ಥಿತಿಯಲ್ಲಿ ಇಟ್ಟಿದೆ. ಇದು ಸ್ಪಷ್ಟ ನಿರ್ಲಕ್ಷ್ಯ,” ಎಂದು ಶಾಂತರಾಜು ಆರೋಪಿಸಿದರು.
“ಈ ಕುಟುಂಬಗಳಿಗೆ ತಕ್ಷಣ ದಾಖಲೆಗಳನ್ನು ಒದಗಿಸಿ, ನಿವೇಶನ ಮತ್ತು ವಸತಿ ನೀಡಬೇಕು. ರಸ್ತೆ, ಕುಡಿಯುವ ನೀರು, ಅಂಗನವಾಡಿ ಕೇಂದ್ರ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು,” ಎಂದು ಗುರುಮೂರ್ತಿ ಒತ್ತಾಯಿಸಿದರು
ವರದಿ: ದೇವರಾಜು R ಚಿಕ್ಕನಾಯಕನಹಳ್ಳಿ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.