Document

ಶ್ರೀ ರಾಮಕೃಷ್ಣ ಸೇವಾಶ್ರಮ,
ನೂತನ ಗೋಶಾಲೆ ಕಟ್ಟಡ ಉದ್ಘಾಟನೆ: ಸುಧಾಮೂರ್ತಿ ನೆರವು

Janataa24 NEWS DESK

IMG 20230407 WA0018
IMG 20230407 WA0019


ಪಾವಗಡ: ಶ್ರೀ ರಾಮಕೃಷ್ಣ ಸೇವಾಶ್ರಮ,
ನೂತನ ಗೋಶಾಲೆ ಕಟ್ಟಡ ಉದ್ಘಾಟನೆ

IMG 20230407 WA0021

ಸ್ಥಳ : ಪ್ರಮೋದಾತ್ಮ ಗೋಸಂರಕ್ಷಣಾ ಕೇಂದ್ರ, ಯಲಗೂರು, ವಿಜಯಪುರ ಜಿಲ್ಲೆ
(ಶ್ರೀ ಉತ್ತರಾಧಿಮಠದ ಶಾಖೆ)
ಶುಕ್ರವಾರ ಮೆ.ಮೂರ್ತಿ ಫೌಂಡೇಷನ್‍ನ ಅಧ್ಯಕ್ಷರಾಗಿರುವ ಶ್ರೀಮತಿ ಸುಧಾಮೂರ್ತಿ ರವರು ಕಟ್ಟಿಸಿದ ಗೋಶಾಲೆಯ ಉದ್ಘಾಟನೆ ನೆರವೇರಿತು. ಈ ಕಾರ್ಯಕ್ರಮಕ್ಕೆ ಪರಮ ಪೂಜ್ಯ ಸ್ವಾಮಿ ಜಪಾನಂದಜಿ ಮಹಾರಾಜ್ ರವರು ವಿಶೇಷ ಆಹ್ವಾನಿತರಾಗಿ ಪ್ರಮೋದಾತ್ಮ ಗೋಸಂರಕ್ಷಣಾ ಕೇಂದ್ರ, ಯಲಗೂರು ಇಲ್ಲಿ ಉಪಸ್ಥಿತರಿದ್ದರು. ಶ್ರೀ ಉತ್ತರಾಧಿಮಠದ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಮುಂಜಾನೆಯಿಂದಲೇ ಶ್ರೀ ಮೂಲರಾಮ ದೇವರ ಪೂಜೆಯನ್ನು ಹಾಗೂ ಮುಖ್ಯ ಪ್ರಾಣದೇವರ ಪೂಜೆಯನ್ನು ನೆರವೇರಿಸಿದರು.

IMG 20230407 WA0022

ಪೂಜೆಯು ಅತ್ಯಂತ ವಿಜೃಂಭಣೆಯಿಂದ ಶ್ರೀಮದ್ ಮಧ್ವಾಚಾರ್ಯರ ಅಮೃತಹಸ್ತದಿಂದ ಪೂಜಿಸಲ್ಪಟ್ಟ ಶ್ರೀ ಮೂಲರಾಮ ದೇವರು, ಶ್ರೀ ವಿಶ್ವವಿಜೇತ ರಾಮದೇವರು, ಶ್ರೀ ವಂಶೀರಾಮ ದೇವರ ಹಾಗೂ ಸೀತಾಮಾತೆಯ ಮೂಲ ವಿಗ್ರಹಗಳ ಆರಾಧನೆಯು ಸರಿಸುಮಾರು ಮೂರು ಗಂಟೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಂದಿದ್ದ ಭಕ್ತರ ಸಮ್ಮುಖದಲ್ಲಿ ನೆರವೇರಿತು. ಈ ಯೋಜನೆಯ ಪ್ರಾಯೋಜಕರಾದ ಶ್ರೀಮತಿ ಸುಧಾಮೂರ್ತಿ ಹಾಗೂ ಅವರ ಸಹೋದರಿಯಾದ ಡಾ.ಸುನಂದಾ ಕುಲಕರ್ಣಿ ರವರು ಉಪಸ್ಥಿತರಿದ್ದರು. ಈ ಅತ್ಯಂತ ಪವಿತ್ರ ಕಾರ್ಯಕ್ರಮದಲ್ಲಿ ಪೂಜ್ಯ ಸ್ವಾಮಿ ಜಪಾನಂದಜೀ ರವರೂ ಸಹ ಪಾಲ್ಗೊಂಡಿದ್ದರು. ಈ ಆರಾಧನೆಯು ನೂತನ ಗೋಶಾಲೆಯ ಆವರಣದಲ್ಲಿ ನೆರವೇರಿತು. ಸರಿಸುಮಾರು ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅತ್ಯಂತ ಸುಸಜ್ಜಿತ ಗೋಶಾಲೆಯು ಸುಮಾರು 800 ಗೋವುಗಳನ್ನು ಹುಲ್ಲು, ನೀರು ಹಾಗೂ ನೆರಳಿನಿಂದ ರಕ್ಷಿಸಲಾಗುತ್ತಿದೆ. ಈ ಯೋಜನೆಗೆ ಪರಮ ಪೂಜ್ಯ ಸ್ವಾಮಿ ಜಪಾನಂದಜೀ ರವರು ಭಾಗಿಯಾಗಿದ್ದಾರೆ.

IMG 20230407 WA0023


ಶ್ರೀ ಮೂಲರಾಮರ ಆರಾಧನೆ ಮತ್ತು ಪೂಜೆಯ ನಂತರ ಮುಖ್ಯ ಪ್ರಾಣದೇವರ ಅಭಿಷೇಕ ಸನಿಹದಲ್ಲಿರುವ ಆಂಜನೇಯ ಸ್ವಾಮಿ ದೇಗುಲದಲ್ಲಿ ನೆರವೇರಿತು. ಈ ವಿಶೇಷ ಅಭಿಷೇಕ ಕಾರ್ಯಕ್ರಮವನ್ನು ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಪೂಜ್ಯ ಸ್ವಾಮಿ ಜಪಾನಂದಜೀ, ಶ್ರೀಮತಿ ಸುಧಾಮೂರ್ತಿ ರವರು ಭಾಗವಹಿಸಿದ್ದರು. ತದನಂತರ ನಡೆದ ಸಭೆಯಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅಧ್ಯಕ್ಷತೆಯಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಶ್ರೀ ಉತ್ತರಾಧಿಮಠದ ಪರವಾಗಿ ಹಾಗೂ ಯಲಗೂರು ಗೋಸಂರಕ್ಷಣಾ ಸಮಿತಿ, ಉತ್ತರಾಧಿ ಮಠದ ಪರವಾಗಿ ಪರಮಪೂಜ್ಯ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್, ಶ್ರೀಮತಿ ಸುಧಾಮೂರ್ತಿ, ಡಾ.ಸುನಂದಾ ಕುಲಕರ್ಣಿ ಹಾಗೂ ಶ್ರೀ ರಮೇಶ್ ರವರಿಗೆ ಸನ್ಮಾನ ಹಾಗೂ ಮೂಲ ರಾಮದೇವರ ಫಲ ಮಂತ್ರಾಕ್ಷತೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಪರಮ ಪೂಜ್ಯ ಸ್ವಾಮಿ ಜಪಾನಂದಜೀ ರವರು ಯೋಜನೆಯ ಬಗ್ಗೆ ಹಾಗೂ ಶ್ರೀಮತಿ ಸುಧಾಮೂರ್ತಿ ರವರ ಕಾರ್ಯವೈಖರಿಯನ್ನು ನೆರೆದ ಜನಸ್ತೋಮಕ್ಕೆ ತಿಳಿಸಿದರು. ಇದೇ ಸಂದರ್ಭದಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮ, ಪಾವಗಡ ಹಾಗೂ ಶ್ರೀಮತಿ ಸುಧಾಮೂರ್ತಿ ರವರ 30 ವರ್ಷಕ್ಕಿಂತಲೂ ಮಿಗಿಲಾದ ಸಹಕಾರ ಹಾಗೂ ಬೆಂಬಲವನ್ನು ತಿಳಿಸಿ ಇಂದು ಈ ಸಭೆ ನಡೆಯುವ ಸಂದರ್ಭದಲ್ಲಿಯೂ ಸಹ ಶ್ರೀಮತಿ ಸುಧಾಮೂರ್ತಿ ರವರ ಮೆ.ಮೂರ್ತಿ ಫೌಂಡೇಷನ್ ನೆರವಿನಿಂದ ಪಾವಗಡ, ಚಳ್ಳಕೆರೆ, ಮೊಳಕಾಲ್ಮೂರು ಭಾಗಗಳ ಸರಿಸುಮಾರು 8000 ದನ ಕರುಗಳು, ಎತ್ತುಗಳು, ಎಮ್ಮೆಗಳು ನಿರಂತರವಾಗಿ ಮೇವನ್ನು ಪಡೆಯುತ್ತಿವೆ ಎಂದು ತಿಳಿಸಿದರು. ಕೋವಿಡ್ ಸಂದರ್ಭದಲ್ಲಿ ಶ್ರೀಮತಿ ಸುಧಾಮೂರ್ತಿರವರ ನೆರವಿನಿಂದ ಆರು ರಾಜ್ಯಗಳಲ್ಲಿ ಲಕ್ಷಾಂತರ ಜನರಿಗೆ ನೆರವನ್ನು ಶ್ರೀರಾಮಕೃಷ್ಣ ಸೇವಾಶ್ರಮ, ಪಾವಗಡದ ಮೂಲಕ ಸೇವೆ ಸಲ್ಲಿಸಿದ ವಿಚಾರವನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ನೆರೆದ ಸಹಸ್ರ ಸಹಸ್ರ ಸಂಖ್ಯೆಯ ಜನಸ್ತೋಮಕ್ಕೆ ಸ್ವಾಮಿ ಜಪಾನಂದಜೀ ರವರು ಶ್ರೀಮತಿ ಸುಧಾ ಮೂರ್ತಿ ರವರು ಕೇವಲ ಸುಧಾಮೂರ್ತಿ ಅಲ್ಲದೆ ವಾತ್ಸಲ್ಯ ಮೂರ್ತಿ, ಕರುಣಾಮೂರ್ತಿ, ದಯಾಮೂರ್ತಿ ಎಂದು ತಿಳಿಸಿದಾಗ ಸಭಿಕರ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ತದನಂತರ ಅನುಗ್ರಹ ಭಾಷಣವನ್ನು ಮಾಡಿದ ಪರಮ ಪೂಜ್ಯ ಶ್ರೀ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಈ ಗೋಸೇವೆಯ ಬಗ್ಗೆ ಹಾಗೂ ಶ್ರೀಮತಿ ಸುಧಾಮೂರ್ತಿರವರು ನೀಡಿರುವ ಪರಮಾದ್ಭುತ ಸಹಕಾರವನ್ನು ಕೊಂಡಾಡಿದರು. ಇದೇ ಸಂದರ್ಭದಲ್ಲಿ ಪೂಜ್ಯ ಶ್ರೀ ಜಪಾನಂದಜೀ ಮಹಾರಾಜ್ ರವರು 1986ನೇ ಇಸವಿಯಿಂದಲೂ ಗೋಸೇವೆಗಾಗಿ ತಮ್ಮನ್ನೇ ತಾವು ತೊಡಗಿಸಿಕೊಂಡಿರುವುದಲ್ಲದೆ ನಾನಾ ರೀತಿಯ ಅಂದರೆ ಕುಷ್ಠರೋಗ, ಕ್ಷಯರೋಗ, ಅಂಧತ್ವ ನಿಯಂತ್ರಣ ಹಾಗೂ ಬರಗಾಲ ಪರಿಹಾರ, ಪ್ರವಾಹ ಪೀಡಿತರ ಸೇವೆ ಹೀಗೆ ನಾನಾ ರೀತಿಯ ಸೇವೆಗಳಿಗೆ ತಮ್ಮ ಜೀವನವನ್ನೇ ಧಾರೆಯೆರೆದಿದ್ದಾರೆ ಎಂದು ಶ್ಲಾಘಿಸಿದರು. ಒಟ್ಟಿನಲ್ಲಿ ಶ್ರೀ ಹನುಮ ಜಯಂತಿಯ ಹಿನ್ನೆಲೆಯಲ್ಲಿ ಹಾಗೂ ನಿನ್ನೆಯಷ್ಟೇ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಯಲಗೂರು ಗ್ರಾಮಕ್ಕೆ ಭೇಟಿ ನೀಡಿ ಆ ಎಲ್ಲ ಪ್ರಶಸ್ತಿಯನ್ನು ಶ್ರೀ ಮೂಲರಾಮನ ಪಾದಾರವಿಂದಗಳಿಗೆ ಸಮರ್ಪಿಸಿ ಇದಾವುದೂ ನನ್ನದಲ್ಲ ಎಂಬ ಮಹತ್ತರವಾದ ಅಂಶವನ್ನು ಇಡೀ ದೇಶಕ್ಕೆ ಶ್ರೀಮತಿ ಸುಧಾಮೂರ್ತಿ ರವರು ತೋರಿಸಿದಲ್ಲದೆ ಗೋವುಗಳಿಗೆ ಮೇವನ್ನೂ ಸಹ ನೀಡುತ್ತಾ ಒಂದು ಪುಟ್ಟ ಮುದ್ದಾದ ಕರುವನ್ನು ಎತ್ತಿಕೊಂಡು ಗೋಶಾಲೆಯಲ್ಲಿ ನಡೆದಾಡಿದ ಸರಳತನದ ಮೂರ್ತಿಯೇ ಶ್ರೀಮತಿ ಸುಧಾಮೂರ್ತಿ ಎನ್ನಬಹುದು. ಕಾರ್ಯಕ್ರಮವು ಶ್ರೀಮೂಲರಾಮರ ಪ್ರಸಾದದೊಂದಿಗೆ ಮುಕ್ತಾಯಗೊಂಡಿತು.

IMG 20230407 WA0025



ವರದಿ

ಪಾವಗಡ:ಇಮ್ರಾನ್ ಉಲ್ಲಾ.

Document

Leave a Reply

Your email address will not be published. Required fields are marked *