Janataa24 NEWS DESK
ಮಧುಗಿರಿಯಲ್ಲಿ ಈದುಲ್ ಪಿತರ್ ಹಬ್ಬದ ಅಂಗವಾಗಿ ಮುಸಲ್ಮಾನ್ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮಧುಗಿರಿ: ಪಟ್ಟಣ ಸೇರಿದಂತೆ ತಾಲೂಕಿನಂತ್ಯ ಮುಸ್ಲಿಂ ಬಾಂಧವರು ಶನಿವಾರ ಈದ್-ಉಲ್- ಫಿತರ್(ರಂಜಾನ್) ಹಬ್ಬದ ಅಂಗವಾಗಿ ಶ್ರದ್ಧಾ-ಭಕ್ತಿಯಿಂದ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪಟ್ಟಣದ ಕಂಜೂಲ್ ಉಲೂಮ್ ಮದರಸಾ ಸಮೀಪದಲ್ಲಿರುವ ಈದ್ಗಾ ಮೈದಾನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಬಾಂಧವರು ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕವಾಗಿ ನಮಾಜ್ ಮಾಡಿದರು.
ಇದು ಇಸ್ಲಾಂ ಧರ್ಮದಲ್ಲಿ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ. ಈ ದಿನದಂದು ಮುಸ್ಲಿಮರು ಉಪವಾಸವನ್ನು ಅಂತ್ಯಗೊಳಿಸುತ್ತಾರೆ. ಹೊಸ ಬಟ್ಟೆ ಧರಿಸುವುದು, ವಿಶೇಷ ಭಕ್ಷ್ಯಗಳನ್ನು ತಯಾರಿಸುವುದು, ದಾನ ಮಾಡುವುದು ಈ ಹಬ್ಬದ ವಿಶೇಷ.
ಸಾಮೂಹಿಕ ಪ್ರಾರ್ಥನೆಯಲ್ಲಿ ನೂತನ ವಸ್ತ್ರಗಳನ್ನು ಧರಿಸಿ ನೂತನ ಟೋಪಿ, ಅರಬ್ ರಾಷ್ಟ್ರಗಳ ಮಾದರಿಯಲ್ಲಿ ರುಮಾಲು ಸುತ್ತಿದ್ದ ಚಿಣ್ಣರು, ಯುವಕರು ಎಲ್ಲರ ಗಮನ ಸೆಳೆದರು.
ನಮಾಜ್ ಬಳಿಕ ಆಶೀರ್ವಚನ ನೀಡಿದ ಧರ್ಮಗುರುಗಳು, ದೇಶದಲ್ಲಿ ಉತ್ತಮ ಮಳೆ, ಬೆಳೆ ಆಗಬೇಕು. ವಿಶ್ವದಲ್ಲಿ ಶಾಂತಿ-ಸೌಹಾರ್ದತೆ ನೆಲೆ ನಿಲ್ಲಬೇಕು. ಈದ್ ಉಲ್ ಫಿತರ್ ಆಚರಣೆಯಿಂದ ಸಮಾಜದಲ್ಲಿ ಸೌಹಾರ್ದ, ಸಹನೆ, ಪರಸ್ಪರ ಪ್ರೀತಿ- ವಿಶ್ವಾಸ ವೃದ್ಧಿಯಾಗಬೇಕು. ಉಳ್ಳವರು ಬಡವರಿಗೆ ದಾನ, ಧರ್ಮ ಮಾಡಬೇಕು ಎಂದು ಸಲಹೆ ನೀಡಿದರು.
ಸಂದರ್ಭದಲ್ಲಿ ಧರ್ಮ ಗುರುಗಳಾದ ಯಾಸಿರ್ ಅರ್ಫಾತ್, ಜಾಮಿಯಾ ಮಸೀದಿ ಅಧ್ಯಕ್ಷರಾದ ಅಲೀಂ, ಕಾರ್ಯದರ್ಶಿಯಾದ ಸಾಧಿಕ್, ಪುರಸಭೆ ಸದಸ್ಯರಾದ ಅಲೀಂ, ಆಸಿಯ ಶಾಜು, ಅಲ್ಪಸಂಖ್ಯಾತರ ಮುಖಂಡರಾದ ಹರ್ಷದ್ ಹುಸೇನ್, ಸಲ್ಮಾನ್ ಭೈಗ್, ಪಾಳ್ಯ ನಬಿ, ಅಲಾಉದ್ದಿನ್, ಜಾಫರ್, ಹಾಗೂ ಸಾವಿರಾರು ಸಂಖ್ಯೆಯಲ್ಲಿ ಮುಸಲ್ಮಾನ್ ಬಾಂಧವರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು…
ಇದು ಪಿತರ್ ವಿಶೇಷತೆ:
(ಇಸ್ಲಾಮಿನ ಶವ್ವಾಲ್ ತಿಂಗಳ ಎರಡನೇ ಉದ್ಧಾತ ಗುಣವೆಂದರೆ ಸರ್ವಶಕ್ತನಾದ ಅಲ್ಲಾಹನು ಅದನ್ನು ಆಚರಿಸಲು ಅರಿಸಿಕೊಂಡಿದ್ದಾನೆ, ಇದುಲ್ ಫಿತರ್ ಶರಿಯಾದಲ್ಲಿ ಗುರುತಿಸಲ್ಪಟ್ಟ ಎರಡು ವಾರ್ಷಿಕ ರಜಾ ದಿನಗಳಲ್ಲಿ ಒಂದಾಗಿದೆ. ರಂಜಾನ್ ನಲ್ಲಿನ ಸಾಧನೆಗಳಿಗೆ ಕೃತಜ್ಞತೆಯ ಸಂಕೇತವಾಗಿ ಶರೀಯಾದಲ್ಲಿ ಈ ದಿನವನ್ನು ರಚಿಸಲಾಗಿದೆ, ರಂಜಾನ್ ನಲ್ಲಿ ಉಪವಾಸ ಮತ್ತು ಇತರ ರೀತಿಯ ಪೂಜೆಗಳನ್ನು ಮಾಡಿದವರಿಗೆ ಈ ದಿನವೂ ಅಲ್ಲಾಹನಿಂದ ಜೀವನದಲ್ಲಿ ಒಂದು ಪ್ರತಿಫಲದ ಸಂಕೇತ)
(ಶಾಸಕರಾದ ಎಂ ವಿ ವೀರಭದ್ರಯ್ಯ ಈದುಲ್ ಫಿತರ್ ಹಬ್ಬದ ಅಂಗವಾಗಿ ಈದ್ಗಾ ಮೈದಾನದ ದಾರಿ ಮದ್ಯ ನಿಂತು ಪ್ರಾರ್ಥನೆ ಸಲ್ಲಿಸಿ ಹಿಂತಿರುಗುತ್ತಿದ್ದ ಮುಸಲ್ಮಾನ್ ಬಾಂಧವರಿಗೆ ಶುಭ ಹಾರೈಸಿದರು)

ವರದಿ
ಮಧುಗಿರಿ: ಅಬಿದ್