JANATAA24 NEWS DESK
Turuvekere: ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ, ಹಣ ವಂಚನೆ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ.

ತುರುವೇಕೆರೆ: ಪಟ್ಟಣದ ಪ್ರವಾಸ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮತ್ತು ಪ್ರತಿಷ್ಠಾಪನ ಸಾರ್ವಜನಿಕ ದತ್ತಿ ಟ್ರಸ್ಟ್ (ರಿ.) ಖಜಾಂಚಿ ಶಿವಯ್ಯ ಮಾತನಾಡಿ,ಭಾರತ ರತ್ನ, ಭಾರತೀಯ ಸಂವಿಧಾನದ ಶಿಲ್ಪಿ ಹಾಗೂ ಸಾಮಾಜಿಕ ನ್ಯಾಯದ ಮಹಾನ್ ಹರಿಕಾರ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಶಾಶ್ವತವಾಗಿ ಪರಿಚಯಿಸುವ ಉದ್ದೇಶದಿಂದ, ತುರುವೇಕೆರೆ ತಾಲೂಕಿನ ಸರ್ವ ಜನಾಂಗದಗಳ, ಸಮುದಾಯಗಳ ಒಮ್ಮತ ಮತ್ತು ಸಹಭಾಗಿತ್ವದೊಂದಿಗೆ ‘ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮತ್ತು ಪ್ರತಿಷ್ಠಾಪನ ಸಾರ್ವಜನಿಕ ಟ್ರಸ್ಟ್ (ರಿ.), ತುರುವೇಕೆರೆ’ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಈ ಟ್ರಸ್ಟ್ನ್ನು 20-02-2026ರಂದು ತುರುವೇಕೆರೆ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಸಂಖ್ಯೆ ಟಿ.ವಿ.ಕೆ -4-00506/2025-26 ಅಡಿಯಲ್ಲಿ ಕಾನೂನುಬದ್ಧವಾಗಿ ನೋಂದಾಯಿಸಲಾಗಿದ್ದು, ಟ್ರಸ್ಟ್ಗೆ ಆದಾಯ ತೆರಿಗೆ ಇಲಾಖೆಯಿಂದ ಪ್ಯಾನ್ ನಂಬರ್ ಸಹ ಪಡೆಯಲಾಗಿದೆ. ಟ್ರಸ್ಟ್ ಸಂಪೂರ್ಣ ಕಾನೂನುಬದ್ಧ ಹಾಗೂ ಪಾರದರ್ಶಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಸಿ ಎ ಶಿವಯ್ಯ ವಿವರಿಸಿದರು.
ಟ್ರಸ್ಟ್ ವತಿಯಿಂದ ತುರುವೇಕೆರೆ ತಾಲೂಕಿನಲ್ಲಿ 12 ಅಡಿ ಎತ್ತರದ ಕಂಚಿನ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ, ಕಲ್ಲಿನ ಮಂಟಪ, ಸುಂದರ ಉದ್ಯಾನವನ, ಆಧುನಿಕ ದೀಪಾಲಂಕಾರ, ಸಾರ್ವಜನಿಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಹಾಗೂ ಅಗತ್ಯ ಮೂಲಸೌಕರ್ಯಗಳೊಂದಿಗೆ ಮಾದರಿ ಸ್ಮಾರಕ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಅದರ ನಿರ್ವಹಣೆಯನ್ನು ಸ್ಥಳೀಯ ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸುವ ಉದ್ದೇಶವನ್ನು ಟ್ರಸ್ಟ್ ಹೊಂದಿದೆ.
ಈ ಯೋಜನೆಗಾಗಿ ಕರ್ನಾಟಕ ಸರ್ಕಾರದಿಂದ ರೂ.1.00 ಕೋಟಿ ವಿಶೇಷ ಅನುದಾನ ಹಾಗೂ ತುರುವೇಕೆರೆ ತಾಲೂಕು ಕಚೇರಿ ಆವರಣದಲ್ಲಿ 40×40 ಅಡಿ ಸ್ಥಳಾವಕಾಶ ಮಂಜೂರು ಮಾಡುವಂತೆ ಸನ್ಮಾನ್ಯ ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಅದರ ಅನುಕ್ರಮವಾಗಿ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯು ದಿನಾಂಕ 07-07-2026ರಂದು ತಹಶೀಲ್ದಾರ್, ತುರುವೇಕೆರೆ ಅವರಿಗೆ ಮನವಿಯನ್ನು ರವಾನಿಸಿ, ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಅಧಿಕೃತ ನಿರ್ದೇಶನ ನೀಡಿದೆ. ಹೀಗಾಗಿ ಯೋಜನೆಯು ಸರ್ಕಾರದ ಆಡಳಿತಾತ್ಮಕ ಪರಿಶೀಲನಾ ಹಂತದಲ್ಲಿದೆ.
ಇಂತಹ ಸಂದರ್ಭದಲ್ಲಿ, ಇತ್ತೀಚಿನ ದಿನಗಳಲ್ಲಿ ಕೆಲವು ವ್ಯಕ್ತಿಗಳು ಅಥವಾ ಸಂಘಟನೆಗಳು ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಅಥವಾ ವಿವಿಧ ಸಂಘಟನೆಗಳ ಹೆಸರನ್ನು ಬಳಸಿಕೊಂಡು ಪುತ್ಥಳಿ ನಿರ್ಮಾಣದ ಹೆಸರಿನಲ್ಲಿ ಸಾರ್ವಜನಿಕರನ್ನು ಸಂಪರ್ಕಿಸಿ ಹಣ, ದೇಣಿಗೆ ಅಥವಾ ವಂತಿಗೆ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಗಮನಕ್ಕೆ ಬಂದಿದೆ ಎಂದು ಶಿವಯ್ಯ ಆತಂಕ ವ್ಯಕ್ತಪಡಿಸಿದರು.
ಆದ್ದರಿಂದ ತುರುವೇಕೆರೆ ತಾಲೂಕಿನ ಸಾರ್ವಜನಿಕರು, ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು, ಉದ್ಯಮಿಗಳು ಹಾಗೂ ಸಮಾಜ ಸೇವಕರು ಅಧಿಕೃತವಾಗಿ ದೃಢೀಕರಿಸದ ಯಾವುದೇ ವ್ಯಕ್ತಿ ಅಥವಾ ಸಂಘಟನೆಗೆ ಹಣ, ದೇಣಿಗೆ ಅಥವಾ ಯಾವುದೇ ರೀತಿಯ ಆರ್ಥಿಕ ಸಹಾಯ ನೀಡಬಾರದು ಎಂದು ಟ್ರಸ್ಟ್ ಪರವಾಗಿ ವಿನಮ್ರವಾಗಿ ಮನವಿ ಮಾಡಿಕೊಳ್ಳಲಾಗಿದೆ. ಯಾರಾದರೂ ಪುತ್ಥಳಿ ನಿರ್ಮಾಣದ ಹೆಸರಿನಲ್ಲಿ ಹಣ ಕೇಳಿದರೆ ಅಥವಾ ಅನುಮಾನಾಸ್ಪದ ರೀತಿಯಲ್ಲಿ ಸಾರ್ವಜನಿಕರನ್ನು ಸಂಪರ್ಕಿಸಿದರೆ, ದೂರವಾಣಿ ಸಂಖ್ಯೆ 97405 77783ಕ್ಕೆ ತಕ್ಷಣ ಮಾಹಿತಿ ನೀಡುವಂತೆ ಕೋರಲಾಗಿದೆ.
ಈ ಯೋಜನೆಯು ಯಾವುದೇ ಒಂದು ಸಮುದಾಯದ ಯೋಜನೆಯಲ್ಲ. ಇದು ತುರುವೇಕೆರೆ ತಾಲೂಕಿನ ಸರ್ವ ಸಮಾಜಗಳ ಏಕತೆ, ಸಂವಿಧಾನದ ಮೌಲ್ಯಗಳ ಪ್ರತಿಷ್ಠಾಪನೆ, ಸಾಮಾಜಿಕ ಸಮಾನತೆ ಮತ್ತು ರಾಷ್ಟ್ರೀಯ ಸೌಹಾರ್ದತೆಯ ಸಂಕೇತವಾಗಿರುವ ಸಾರ್ವಜನಿಕ ಯೋಜನೆಯಾಗಿದೆ. ಆದ್ದರಿಂದ ಯಾವುದೇ ವದಂತಿಗಳಿಗೆ ಕಿವಿಗೊಡದೆ, ಅಧಿಕೃತ ಮಾಹಿತಿಯನ್ನು ಮಾತ್ರ ನಂಬುವಂತೆ ಮತ್ತು ಯೋಜನೆಯ ಯಶಸ್ಸಿಗೆ ಸಹಕರಿಸುವಂತೆ ತಾಲೂಕಿನ ಸಮಸ್ತ ನಾಗರಿಕರಲ್ಲಿ ವಿನಂತಿಸಲಾಗಿದೆ. ತುರುವೇಕೆರೆ ತಾಲೂಕಿನ ಪ್ರತಿಯೊಬ್ಬ ನಾಗರಿಕರ ಜಾಗೃತಿ, ಸಹಕಾರ ಮತ್ತು ಒಗ್ಗಟ್ಟಿನಿಂದ ಈ ಐತಿಹಾಸಿಕ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ ಎಂದು ಶಿವಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪುತ್ತಳಿ ನಿರ್ಮಾಣ ಪ್ರತಿಷ್ಠಾಪನ ಟ್ರಸ್ಟ್ ಅಧ್ಯಕ್ಷ ಪಿ ಎಚ್ ಧನಪಾಲ್, ಕಾರ್ಯದರ್ಶಿ ಎಸ್ ಎಂ ಕುಮಾರಸ್ವಾಮಿ, ಗಂಗಾಧರ್ ದೇವರಮನೆ, ಬಿ ಆರ್ ಕೃಷ್ಣಸ್ವಾಮಿ, ಸಿಎಸ್ ಮೂರ್ತಿ, ದೋಂಕಿಹಳ್ಳಿ ರಾಮಣ್ಣ, ಎಚ್ವಿ ವಸಂತಕುಮಾರ್, ಬೀಚನಹಳ್ಳಿ ರಾಮಣ್ಣ , ಕೊಡಗಿಹಳ್ಳಿರಾಮಚಂದ್ರಯ್ಯ, ಸೋಮನಹಳ್ಳಿ ಜಗದೀಶ್, ಗಾಣಿಗ ಸಮಾಜದ ಅಧ್ಯಕ್ಷ ವಿಜಯ ನರಸಿಂಹ ಶೆಟ್ಟಿ, ಸವಿತಾ ಸಮಾಜದ ಅಧ್ಯಕ್ಷ ಧನಂಜಯ, ಶಿವರಾಜ್ ಬಡಡಾವಣೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
https://www.janataa24.com/operation-sindor-pok-9-terrorist/