Janataa24 NEWS DESK

ಡಿ.ವಿ.ಜಿ.ರವರ ಜೀವನ ಧರ್ಮ ದರ್ಶನ ದ 100ನೆಯ ಉಪನ್ಯಾಸದ ಸಂದರ್ಭದಲ್ಲಿ:ಸ್ವಾಮೀ ಜಪಾನಂದಜೀ ರವರಿಂದ ಉಪನ್ಯಾಸ.

ತುಮಕೂರು: ತುಮಕೂರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನೂತನವಾಗಿ ನಿರ್ಮಿಸಿರುವ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಅದ್ಭುತವಾದ ಒಂದು ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಕನ್ನಡ ಸಾರಸ್ವತ ಲೋಕದ ದಿಗ್ಗಜರಾದ ಡಾ.ಗುರುರಾಜ ಕರ್ಜಗಿ, ನಾಡೋಜ ಡಾ.ಮಹೇಶ್ ಜೋಷಿ ಹಾಗೂ ಶ್ರೀ ಚಂದ್ರಮೌಳಿ (ಡಿ.ವಿ.ಜಿ.ರವರ ಸೋದರನ ಮಗ) ರವರು ಭಾಗವಹಿಸಿದ್ದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪ್ರಧಾನ ಉಪನ್ಯಾಸಕರಾದ ಶ್ರೀಮತ್ ಸ್ವಾಮಿ ಜಪಾನಂದಜೀ ಮಹಾರಾಜ್ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಹಿರಿಯ ಸಂಪಾದಕರಾದ ಶ್ರೀ ಎಸ್.ನಾಗಣ್ಣ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಶ್ರೀ ಕೆ.ಎಸ್.ಸಿದ್ದಲಿಂಗಪ್ಪ ರವರು ಭಾಗವಹಿಸಿದ್ದರು. ತುಮಕೂರಿನ ನಾಗರಿಕರು ಹಾಗೂ ಪ್ರಾಂಶುಪಾಲರುಗಳು, ಮಹಿಳಾ ಸದಸ್ಯರುಗಳು ಮುಂತಾದವರು ಭಾಗವಹಿಸಿದ್ದರು. ಕಾರ್ಯಕ್ರಮವು ಪ್ರಖ್ಯಾತ ಗಮಕಿಗಳಾದ ಶ್ರೀಮತಿ ಲಕ್ಷ್ಮೀ ಜೈಪ್ರಕಾಶ್ ಮತ್ತು ವ್ಯಾಖ್ಯಾನವನ್ನು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿದ್ವಾನ್ ಎಂ.ಜಿ.ಸಿದ್ದರಾಮಯ್ಯ ರವರು ನಡೆಸಿಕೊಟ್ಟರು. ಅತ್ಯಂತ ಸುಶ್ರಾವ್ಯವಾಗಿ ಮತ್ತು ಅರ್ಥಗರ್ಭಿತವಾಗಿ ಈ ಕಾರ್ಯಕ್ರಮ ಮೂಡಿಬಂದಿತು.

ಕಾರ್ಯಕ್ರಮದಲ್ಲಿ ಮಂಕುತಿಮ್ಮನ ಕಗ್ಗವನ್ನು ಆರಿಸಿಕೊಂಡಿದ್ದು ವಿಶೇಷವಾಗಿತ್ತು. ಪ್ರಾಸ್ತಾವಿಕ ನುಡಿ ನುಡಿದ ಪರಮ ಪೂಜ್ಯ ಸ್ವಾಮಿ ಜಪಾನಂದಜೀ ರವರು ಒಬ್ಬ ಸರ್ವಸಂಗ ಪರಿತ್ಯಾಗಿಯಾಗಿ ಡಿ.ವಿ.ಜಿ.ರವರ ಮಂಕುತಿಮ್ಮನ ಕಗ್ಗ ತಮ್ಮ ಜೀವನದಲ್ಲಿ ಯಾವ ರೀತಿಯ ಪ್ರಭಾವವನ್ನು ಬೀರಿತು ಎಂಬುದನ್ನು ಅತ್ಯಂತ ಮನೋಜ್ಞಕರವಾಗಿ ಅನೇಕ ಉದಾಹರಣೆಗಳ ಮೂಲಕ ವಿವರಿಸಿದ್ದು ಅತ್ಯಂತ ಪರಿಣಾಮಕಾರಿಯಾಗಿತ್ತು. ಈ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಯವರು ಡಿ.ವಿ.ಜಿ.ಯವರನ್ನು ಒಬ್ಬ ಬ್ರಹ್ಮಜ್ಞ ಪುರುಷ ಎಂದು ಉಪನಿಷತ್ ವಾಕ್ಯಗಳ ಹಾಗೂ ಡಿ.ವಿ.ಜಿ. ರವರ ನಿಜ ಜೀವನದ ವೈರಾಗ್ಯ ಹಾಗೂ ಪ್ರಾಪಂಚಿಕದ ಲವಶೇಷವೂ ಇಲ್ಲದ ಪರಮಾದ್ಭುತ ಸಾಧನೆಯ ಜೀವನ ಎಂದು ಬಣ್ಣಿಸಿದರು. ತದನಂತರ ಮಾತನಾಡಿದ ಡಾ.ಗುರುರಾಜ ಕರ್ಜಗಿ ರವರು ಡಿ.ವಿ.ಜಿ. ರವರ ದಿವ್ಯ ಜೀವನವನ್ನು ವರ್ಣಿಸಿದುದಲ್ಲದೆ ಆಯ್ದ ಕಗ್ಗದ ವ್ಯಾಖ್ಯಾನವನ್ನು ಅತ್ಯಂತ ಸುಂದರವಾಗಿ ಪ್ರಸ್ತುತಪಡಿಸಿದರು. ನಾಡೋಜ ಡಾ.ಮಹೇಶ್ ಜೋಶಿ ರವರು ಡಿ.ವಿ.ಜಿ.ರವರನ್ನು ಕಂಡ ದಿನದಿಂದ ಅವರ ಪ್ರಭಾವ ಅವರಿಗಾಗಿ ತನ್ಮೂಲಕ ದೂರದರ್ಶನ ಹಾಗೂ ಕನ್ನಡ ಸಾರಸ್ವತ ಲೋಕಕ್ಕೆ ಸೇವೆ ಮಾಡುತ್ತಿರುವುದು ತಮ್ಮ ಭಾಗ್ಯ ಎಂದು ವರ್ಣಿಸಿದರು. ಇದೇ ಸಂದರ್ಭದಲ್ಲಿ ಶಿಶುನಾಳ ಶರೀಫರ ಗುರುಗಳಾದ ಗುರುಗೋವಿಂದ ಭಟ್ ರವರ ವಂಶಸ್ಥರು ಎಂಬುದನ್ನು ಅತ್ಯಂತ ಹೆಮ್ಮೆಯಿಂದ ತಿಳಿಸಿದರು.
ಶ್ರೀ ಚಂದ್ರಮೌಳಿರವರು ತಮ್ಮ ಜೀವನದ ಅನೇಕ ದಶಕಗಳ ಅದ್ಭುತ ಅನುಭವ ಡಿ.ವಿ.ಜಿ. ರವರ ಸಾಮೀಪ್ಯದಿಂದ ಪಡೆದಿದ್ದನ್ನು ವಿವರಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮವು ಪ್ರೊ.ವೆಂಕಟೇಶ್ವರಲು ರವರ ಸ್ವಾಗತ ಭಾಷಣದಿಂದ ಆರಂಭವಾಗಿ ಹಿರಿಯ ಸಂಪಾದಕರೂ ಆದ ಶ್ರೀ ಎಸ್.ನಾಗಣ್ಣನವರ ವಂದನಾರ್ಪಣೆಯೊಂದಿಗೆ ಮುಕ್ತಾಯವಾಯಿತು. ತಮ್ಮ ವಂದನಾರ್ಪಣಾ ಸಂದರ್ಭದಲ್ಲಿ ಪೂಜ್ಯ ಜಪಾನಂದಜೀ ರವರ ಸೇವಾ ಕಾರ್ಯಯೋಜನೆಗಳ ಪರಿಚಯವನ್ನು ಸಭಿಕರಿಗೆ ನೀಡಿ ತಮ್ಮ ಎಲ್ಲ ಬಗೆಯ ಸೇವಾ ಯಜ್ಞಗಳೊಂದಿಗೆ ಸಾರಸ್ವತ ಲೋಕದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸುತ್ತಿರುವ ಅಪರೂಪದ ಸಂನ್ಯಾಸಿ ಎಂದು ಬಣ್ಣಿಸಿದುದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಶ್ರೀ ವಾಸವಿ ಸಂಘದ ಅಧ್ಯಕ್ಷರಾದ ಡಾ.ಆರ್.ಎಲ್.ರಮೇಶ್ ಬಾಬು, ಟೂಡಾ ಅಧ್ಯಕ್ಷರಾದ ಶ್ರೀ ಹೆಚ್.ಜಿ.ಚಂದ್ರಶೇಖರ್ ಹಾಗೂ ಆಶ್ರಮದ ಸಂಯೋಜಕರಾದ ಶ್ರೀ ಎಂ.ಎಸ್.ನಾಗರಾಜು ರವರು ಕಾರ್ಯಕ್ರಮ ಯಶಸ್ವಿಯಾಗಲು ಸಹಕಾರ ನೀಡಿದರು. ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದಿಂದ 30 ಜನ ಭಕ್ತರು ಭಾಗವಹಿಸಿದ್ದುದು ವಿಶೇಷವಾಗಿತ್ತು. ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ತುಮಕೂರು ನಗರದಲ್ಲಿಯೇ ಒಂದು ವಿಶಿಷ್ಟ ಕಾರ್ಯಕ್ರಮವೆಂಬುದಾಗಿ ಪರಿಗಣಿಸಲ್ಪಟ್ಟಿತು. ಇದೇ ಸಂದರ್ಭದಲ್ಲಿ ಸಭಾಂಗಣ ತುಂಬಿದ್ದು ಕಾರ್ಯಕ್ರಮಕ್ಕೆ ಹೆಚ್ಚು ಮೆರಗು ದೊರೆಯಿತು. ಕಾರ್ಯಕ್ರಮದ ಕೆಲವು ಛಾಯಾಚಿತ್ರಗಳನ್ನು ಇದರೊಂದಿಗೆ ಲಗತ್ತಿಸಲಾಗಿದೆ.
ವರದಿ: ಇಮ್ರಾನ್ ಉಲ್ಲಾ. ಪಾವಗಡ