JANATAA24 NEWS DESK

CN Halli: ಮತಕ್ಕೆ ಮಾತ್ರ ಬೆಲೆ, ಬದುಕಿಗಿಲ್ಲ ನೆಲೆ-ಕುಡಿಯಲು ನೀರಿಲ್ಲ,ಇರಲು ಸೂರಿಲ್ಲ ಅಜ್ಜಿಯ ಅನ್ನಭಾಗ್ಯ ಅಧಿಕಾರಿಗಳ ಪಾಲು.
7 ದಶಕಗಳ ಸ್ವಾತಂತ್ರ್ಯದ ನಡುವೆಯೂ ಕರಿಯಮ್ಮ ಅಜ್ಜಿಯ ಕಣ್ಣೀರು!
ಹುಳಿಯಾರು: “ಮತದಾನದ ಹಕ್ಕಿದೆ, ಆದರೆ ಬದುಕುವ ಹಕ್ಕಿಲ್ಲ…” ಇದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿ ಸೋಮನಹಳ್ಳಿ ಗ್ರಾಮದ 70 ವರ್ಷದ ವಯೋವೃದ್ಧೆ ಕರಿಯಮ್ಮ ಅವರ ಇಂದಿನ ದಾರುಣ ಸ್ಥಿತಿ. ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ, ಈ ಪರಿಶಿಷ್ಟ ಜಾತಿಯ (ಮಾದಿಗ) ಅಜ್ಜಿಗೆ ಇನ್ನೂ ಸರ್ಕಾರದ ಒಂದೇ ಒಂದು ಮೂಲಭೂತ ಸೌಲಭ್ಯ ಸಿಕ್ಕಿಲ್ಲ ಎನ್ನುವುದು ಆಡಳಿತ ಯಂತ್ರಕ್ಕೆ ಹಿಡಿದ ಕನ್ನಡಿಯಾಗಿದೆ. ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಉದ್ದೇಶ ಪೂರ್ವಕ ನಿರ್ಲಕ್ಷವೇ ಈ ಅಜ್ಜಿಯ ಪರಿಸ್ಥಿತಿಗೆ ನೇರ ಕಾರಣ.
CN Halli: ಸೋರುತ್ತಿರುವ ಮನೆ, ಸಿಗದ ಅನ್ನಭಾಗ್ಯ.
ಕರಿಯಮ್ಮ ಅಜ್ಜಿಯ ವಾಸವಿರುವ ಮನೆ ಮಳೆ ಬಂದರೆ ಸಾಕು ಉಳಿಯಲು ಜಾಗವಿಲ್ಲದೆ ಕೆಸರ ಗಡ್ಡೆಯಾಗುತ್ತದೆ. ಗಾಳಿ-ಮಳೆ ನೇರವಾಗಿ ಮನೆಯೊಳಗೆ ಬರುತ್ತದೆ. ಇನ್ನು ಕುಡಿಯುವ ನೀರಿನ ಬಗ್ಗೆ ಕೇಳುವವರೇ ಇಲ್ಲ. 70 ವರ್ಷ ದಾಟಿದರೂ ವೃದ್ಧಾಪ್ಯ ವೇತನ ನೀಡದೆ ಅಧಿಕಾರಿಗಳು ತಮ್ಮ ಲಂಚದ ಆಮಿಷಕ್ಕೆ ಹಾಗೂ ದಲಿತ ಕೇರಿಗಳೆಂದರೆ ಉಡಾಫೆಯಿಂದ ಯಾವುದೇ ಪಿಂಚಣಿ ನೀಡಿರಲಿಲ್ಲ (ನಂತರ ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ ಹಾಗೂ ಪತ್ರಿಕೆಗಳು ವರದಿ ಮಾಡಿ ಪಿಂಚಣಿ ಒಂದನ್ನು ಮಾಡಿಕೊಟ್ಟಿದ್ದಾರೆ), ಗಂಡ ತೀರಿಹೋದರೂ ವಿಧವಾ ವೇತನವನ್ನೂ 30 ವರ್ಷಗಳಿಂದ ನೀಡಿರಲಿಲ್ಲ. ಗೃಹಲಕ್ಷ್ಮಿ, ಅನ್ನಭಾಗ್ಯದಂತಹ ಮಹತ್ತರ ಯೋಜನೆಗಳು ಕೇವಲ ಜಾಹೀರಾತಿಗೆ ಸೀಮಿತವಾಗಿದ್ದು, ಈ ಅಜ್ಜಿಯ ಕೈ ಸೇರಿಲ್ಲ.
ದಾಖಲೆಗಳ ನೀಡದೆ ಅಧಿಕಾರಿಗಳ ಚೆಲ್ಲಾಟ
ಮಾತಂಗಮುನಿ ಪರಿವಾರ ಸೇವಾ ಟ್ರಸ್ಟ್ ಈ ಪ್ರಕರಣವನ್ನು ಬೆಳಕಿಗೆ ತಂದು, ದಿನಾಂಕ 12.09.2025ರಂದು ಸಮಾಜ ಕಲ್ಯಾಣ ಇಲಾಖೆಯ ಮೂಲಕ ತಹಶೀಲ್ದಾರ್ ಅವರಿಗೆ ಅಧಿಕೃತ ಪತ್ರ ಬರೆಸಿದೆ. ಪತ್ರದಲ್ಲಿ ಸಹಾಯಕ ನಿರ್ದೇಶಕರು (ಗ್ರೇಡ್-2), ಈ ಪ್ರಕರಣವನ್ನು “ವಿಶೇಷ ಮತ್ತು ತುರ್ತು ಪ್ರಕರಣ” ಎಂದು ಪರಿಗಣಿಸಿ ಆಧಾರ್, ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ ಮತ್ತು ಮರಣ ದೃಢೀಕರಣ ಪತ್ರಗಳನ್ನು ನೀಡಲು ಕೋರಿದ್ದಾರೆ.
ಆದರೆ, ಅಧಿಕಾರಿಗಳ ವರ್ತನೆ ಮಾತ್ರ ಹೇಯವಾಗಿದೆ. ರೇಷನ್ ಕಾರ್ಡ್ ಕೇಳಲು ಹೋದರೆ ಆಹಾರ ಶಿರಸ್ತೇದಾರ್ ಪ್ರಜ್ವಲ್ ಮತ್ತು ಸಿಬ್ಬಂದಿ ರಾಹುಲ್ ಅವರು, “ಸಂಬಳ ಪಡೆಯಲು ನಾವು ಕೆಲಸ ಮಾಡುತ್ತೇವೆ, ದಾಖಲೆಗಳನ್ನು ನೀವೇ ಮಾಡಿಸಿಕೊಳ್ಳಬೇಕು” ಎನ್ನುವ ಉಡಾಫೆ ಉತ್ತರ ನೀಡುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಕರ್ತವ್ಯ ಪ್ರಜ್ಞೆ ಮರೆತ ಇಂತ ಬೇಜವಾಬ್ದಾರಿ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮಾನವೀಯತೆ ಹಾಗೂ ಕರ್ತವ್ಯ ಪ್ರಜ್ಞೆ ಮರೆತು
ತಾಲ್ಲೂಕಿನಲ್ಲಿ ಬದುಕಿದ್ದಾರ ಎನ್ನುವ ಪ್ರಶ್ನೆ ಸಮಾಜದಲ್ಲಿ ಎದ್ದಿದೆ.
ಸಮಾಜ ಕಲ್ಯಾಣ ಇಲಾಖೆ ಪತ್ರ ಬರೆದು 8 ತಿಂಗಳುಗಳೇ ಕಳೆದರೂ ಕಂದಾಯ ಇಲಾಖೆ ಏಕೆ ಮೌನವಾಗಿದೆ? ತಹಶೀಲ್ದಾರ್ ಕಚೇರಿಯಲ್ಲಿ ಬಡವರ ಅರ್ಜಿಗಳು ಧೂಳು ಹಿಡಿಯುತ್ತಿವೆಯೇ? 70 ವರ್ಷದ ಅಜ್ಜಿ ದಾಖಲೆಗಳಿಗಾಗಿ ಅಲೆಯಬೇಕೇ ಅಥವಾ ಅವರಿಗೆ ಮನೆಬಾಗಿಲಿಗೆ ಸೌಲಭ್ಯ ತಲುಪಿಸಬೇಕೇ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.
“ನಾವು ಹಾಯಾಗಿ ಸಂಬಳ ಪಡೆಯುತ್ತೇವೆ” ಎನ್ನುವ ಅಧಿಕಾರಿಗಳ ಅಹಂಕಾರದ ಮಾತಿನ ಹಿಂದೆ ಬಡವರ ಬದುಕಿನ ನೋವು ಮರೆಯಾಗಿದೆ.
ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ಈ ಹಿರಿಯ ಜೀವಕ್ಕೆ ನ್ಯಾಯ ಒದಗಿಸದಿದ್ದರೆ ಈ ಹೋರಾಟ ತೀವ್ರ ಸ್ವರೂಪ ಪಡೆಯುವುದರಲ್ಲಿ ಸಂಶಯವಿಲ್ಲ.
ವರದಿ: ದೇವರಾಜು R, ಚಿಕ್ಕನಾಯಕನಹಳ್ಳಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.