Janataa24 NEWS DESK

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮುಂಜಾನೆ ಬಿರಿಯಾನಿ ಎಂದೇ ರಾಜ್ಯ ಮಾತ್ರವಲ್ಲದೆ ಹೊರ ಭಾಗಗಳಿಂದಲೂ ಜನರನ್ನು ಸೆಳೆದಿದ್ದ ಹೊಸಕೋಟೆ ಬಿರಿಯಾನಿ ಅಂಗಡಿ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ತೆರಿಗೆ ವಂಚನೆ ವಿರುದ್ಧದ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿನ ಬಿರಿಯಾನಿ ಅಂಗಡಿ ಮಾಲೀಕರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಂಚನೆ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ.
ಬೆಂಗಳೂರಿನ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಹೊಸಕೋಟೆಯು ತಡರಾತ್ರಿ ಮತ್ತು ಮುಂಜಾನೆ ಬಿರಿಯಾನಿ ತಾಣವಾಗಿ ಜನಪ್ರಿಯವಾಗಿದೆ. ಇದು ಸಾವಿರಾರು ಜನ ಬಿರಿಯಾನಿ ಪ್ರಿಯರನ್ನು ಆಕರ್ಷಿಸಿದೆ. ತೆರಿಗೆ ವಂಚನೆ ಸಂಬಂಧ ಇಲಾಖೆಯ ವಿಜಿಲೆನ್ಸ್ ವಿಭಾಗದಿಂದ 50 ಸದಸ್ಯರ ತಂಡ ಹೊಸಕೋಟೆಯಲ್ಲಿ ವ್ಯಾಪಕ ಶೋಧ ನಡೆಸಿದ್ದು, ಈ ಬಿರಿಯಾನಿ ಮಾರಾಟಗಾರರು ಮಾಡುತ್ತಿದ್ದ ತೆರಿಗೆ ವಂಚನೆಯನ್ನು ಬಹಿರಂಗಪಡಿಸಿದೆ ಎಂದು ಕರ್ನಾಟಕ ವಾಣಿಜ್ಯ ತೆರಿಗೆಗಳ ಆಯುಕ್ತ ಸಿ ಶಿಖಾ ಹೇಳಿದ್ದಾರೆ.
ತೆರಿಗೆ ವಂಚಿಸಲು ಅವರು 30 ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಕ್ಯೂಆರ್ ಕೋಡ್ಗಳನ್ನು ಬಿರಿಯಾನಿ ಅಂಗಡಿಯ ಮಾಲೀಕರು ಬಳಸುತ್ತಿದ್ದನ್ನು ಪತ್ತೆಹಚ್ಚಿದ್ದೇವೆ. ಅಲ್ಲದೆ ನಮ್ಮ ಕಾರ್ಯಾಚರಣೆಯ ಸಮಯದಲ್ಲಿ ನಾವು ಅವರ ನಿವಾಸದಲ್ಲಿ 1.47 ಕೋಟಿ ರೂಪಾಯಿ ಹಣವನ್ನು ಪತ್ತೆಹಚ್ಚಿದ್ದೇವೆ. ಬಳಿಕ ತಕ್ಷಣ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದೇವೆ ಎಂದು ಶಿಖಾ ಹೇಳಿದರು.
ಅನೇಕ ಅಂಗಡಿ ಮಾಲೀಕರು ನಗದು ವಹಿವಾಟಿನ ಜೊತೆಗೆ ಹಲವಾರು ಯುಪಿಐ ಖಾತೆಗಳ ಮೂಲಕ ಹಣವನ್ನು ಪಾವತಿ ಮಾಡಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಆಗಾಗ್ಗೆ ಯುಪಿಐ ಖಾತೆಗಳನ್ನು ಬದಲಾಯಿಸುತ್ತಿದ್ದಾರೆ. ಇದು ನಿಜವಾದ ಜಿಎಸ್ಟಿ ವಹಿವಾಟುಗಳನ್ನು ಮರೆಮಾಚಲು ಮತ್ತು ತೆರಿಗೆ ವಂಚಿಸಲು ಮಾಡಿಕೊಂಡ ತಂತ್ರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಹೋಟೆಲ್ನವರು ತಮ್ಮ ಆಹಾರ ಪದಾರ್ಥಗಳಿಗೆ ತೆರಿಗೆ ಇನ್ವಾಯ್ಸ್ ಮತ್ತು ಮಾರಾಟದ ಬಿಲ್ಗಳನ್ನು ನೀಡುತ್ತಿಲ್ಲ. ಸರಿಯಾದ ಲೆಕ್ಕಪತ್ರ ದಾಖಲೆಗಳನ್ನು ನಿರ್ವಹಿಸುತ್ತಿಲ್ಲ. ಹೀಗಾಗಿ ಇಲಾಖೆಯು ನಿರಂತರವಾಗಿ ತೆರಿಗೆ ವಂಚಕರು ಅಳವಡಿಸಿಕೊಂಡ ವಿಧಾನಗಳನ್ನು ವಿಶ್ಲೇಷಿಸುವ ಮತ್ತು ವಿವಿಧ ವಿರುದ್ಧ ಕ್ರಮ ಕೈಗೊಳ್ಳುವತ್ತ ಗಮನ ಹರಿಸುತ್ತಿದೆ ಎಂದು ಅವರು ಹೇಳಿದರು.
ಭಾರತದ ಆದಾಯ ತೆರಿಗೆ ಕಾಯಿದೆಯು ಮನೆಯಲ್ಲಿ ಇರಿಸಬಹುದಾದ ನಗದು ಮೊತ್ತದ ಮೇಲೆ ನಿರ್ದಿಷ್ಟ ಮಿತಿಯನ್ನು ನಿರ್ದಿಷ್ಟಪಡಿಸುವುದಿಲ್ಲ. ಆದರೆ ಈ ಕಾಯಿದೆ ಪ್ರಕಾರ ತೆರಿಗೆ ಅಧಿಕಾರಿಗಳು ಪ್ರಶ್ನಿಸಿದರೆ ಯಾವುದೇ ಮಹತ್ವದ ನಗದು ಠೇವಣಿ ಅಥವಾ ಹಿಡುವಳಿಗಳ ಮೂಲಕ್ಕಾಗಿ ಸಂಬಂಧಪಟ್ಟ ವ್ಯಕ್ತಿಗಳು ವಿವರಣೆಯನ್ನು ನೀಡಬೇಕಾಗುತ್ತದೆ.
ನೀವು ಹೊಂದಿರುವ ಯಾವುದೇ ನಗದನ್ನು ಸರಿಯಾಗಿ ಲೆಕ್ಕ ಹಾಕಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ ಮತ್ತು ಅದನ್ನು ಪರಿಶೀಲನೆಯ ಸಂದರ್ಭದಲ್ಲಿ ವಿವರಿಸಬಹುದು. ಇಲ್ಲಿ ಅನೇಕ ಯುಪಿಐ ವಹಿವಾಟುಗಳಿಗೆ ಸಂಬಂಧಿಸಿದಂತೆ ಸರಿಯಾದ ಲೆಕ್ಕಪತ್ರವಿಲ್ಲದೆ ವಿವಿಧ ಖಾತೆಗಳಿಗೆ ಠೇವಣಿಗಳ ಮೂಲಕ ತೆರಿಗೆ ವಂಚನೆ ಮಾಡುವಂತಹ ಅನುಮಾನಾಸ್ಪದ ವಹಿವಾಟುಗಳು ನಡೆದಿವೆ ಎಂದು ಅಧಿಕಾರಿ ಹೇಳಿದರು.