ಗುಬ್ಬಿ: ದೇವರಾಜು
ಗುಬ್ಬಿ: ಪಟ್ಟಣದ ಕೆಎಂಎಫ್ ಪಶು ಆಹಾರ ಘಟಕದಲ್ಲಿ ಕೂಲಿ ಕೆಲಸ ಮಾಡಲು ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ಕರೆತಂದು ಕಡಿಮೆ ಕೂಲಿ ನೀಡಿ ಅನಧಿಕೃತವಾಗಿ ಘಟಕದಲ್ಲೇ ಶೆಡ್ ಕಟ್ಟಿ 45 ಮಂದಿಯನ್ನು ಜೀತದಾಳು ರೀತಿ ನಡೆಸಿಕೊಳ್ಳುತ್ತಿರುವುದು ಮಾನವ ಹಕ್ಕು ಉಲ್ಲಂಘನೆಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ನಾಗಸಂದ್ರ ವಿಜಯಕುಮಾರ್ ಆರೋಪಿಸಿದರು.

ಪಶು ಆಹಾರ ಘಟಕಕ್ಕೆ ಕಾರ್ಮಿಕ ನಿರೀಕ್ಷಕಿ ಸುಶೀಲಾ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಪ್ರತಿಕ್ರಿಯೆ ವ್ಯಕ್ತ ಪಡಿಸಿದ ಅವರು ಗಾಳಿ ಬೆಳಕು ಇಲ್ಲದ ಎರಡು ಶೆಡ್ ನಲ್ಲಿ ಬಂಧನ ರೀತಿಯಲ್ಲಿ ಕೆಲಸ ಮಾಡುತ್ತಾ ಬದುಕು ಕಳೆಯುತ್ತಿದ್ದಾರೆ. ರಾತ್ರಿ ವೇಳೆ ಕಗ್ಗತ್ತಲಲ್ಲಿ ಕಾಲ ಕಳೆದು ಖಾರಗೃಹ ಶಿಕ್ಷೆ ರೀತಿ ಘಟಕದಿಂದ ಹೊರ ಹೋಗದಂತೆ ಕೂಲಿ ಮಾಡಿಸಿಕೊಳ್ಳುತ್ತಿರುವುದು ಶೋಚನೀಯ ಎನಿಸಿದೆ ಎಂದರು.

ಘಟಕದಲ್ಲಿ ಈಗಾಗಲೇ ಹೊರ ಗುತ್ತಿಗೆ ಆಧಾರದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸ್ಥಳೀಯರು ಕಾರ್ಮಿಕ ನಿಯಮದಡಿ ಕರ್ತವ್ಯ ಮಾಡುತ್ತಾರೆ ಎಂಬ ಕಾರಣಕ್ಕೆ ಹೊರ ರಾಜ್ಯದಿಂದ ಬರುವ ವಲಸೆ ಕಾರ್ಮಿಕರನ್ನು ಅನಧಿಕೃತವಾಗಿ ಕರೆತಂದು ಕೂಲಿ ಮಾಡಿಸುತ್ತಿದ್ದಾರೆ. ಇವರಿಗೆ ಕಾರ್ಮಿಕ ಕಾನೂನು ಅರಿವು ಇಲ್ಲದಿರುವುದೇ ಪ್ಲಸ್ ಪಾಯಿಂಟ್ ಮಾಡಿಕೊಂಡು ಹಣ ದೋಚುವ ತಂತ್ರ ಬಳಸಿದ್ದಾರೆ. ಈ ಬಗ್ಗೆ ತನಿಖೆಗೆ ಆಗ್ರಹಿಸಲಾಗಿದೆ ಎಂದರು.

ಕರೆಂಟ್, ನೀರು, ಶೌಚಾಲಯ ಸೇರಿದಂತೆ ಯಾವುದೇ ಮೂಲ ಸೌಲಭ್ಯ ಒದಗಿಸದ ಈ ಶೆಡ್ ಗಳಲ್ಲಿ ಯಾವುದೇ ಪ್ರಾಣಿಗಳು ಸಹ ಸಾಕುವುದಿಲ್ಲ. ಈ ರೀತಿ ನಿಕೃಷ್ಟ ಬದುಕಿಗೆ ದೂಡಿದವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಕಾರ್ಮಿಕರ ಬದುಕು ಬವಣೆ ಬಗ್ಗೆ ತಾಲ್ಲೂಕು ಆಡಳಿತ ಗಮನಿಸಬೇಕು. ಈ ಬಗ್ಗೆ ಮಾನವ ಹಕ್ಕು ಆಯೋಗಕ್ಕೂ ದೂರು ಸಲ್ಲಿಸಲಿದ್ದೇವೆ. ಹಕ್ಕು ಉಲ್ಲಂಘಿಸಿದವರಿಗೆ ಶಿಕ್ಷೆ ಆಗಬೇಕು ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಚೇಳೂರು ಶಿವನಂಜಪ್ಪ, ಬಿ.ಲೋಕೇಶ್, ಗಂಗರಾಂ ಇತರರು ಇದ್ದರು.