Janataa24 NEWS DESK

ಬೆಂಗಳೂರು, ಜು.10- ನ್ಯಾಯಾಲಯದಲ್ಲಿ ಇತ್ಯರ್ಥವಾದ ನಂತರ ಖಾಲಿ ಇರುವ 13,500 ಪ್ರಾಥಮಿಕ ಶಿಕ್ಷಕರ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಸಚಿವ ಮಧುಬಂಗಾರಪ್ಪ ವಿಧಾನಪರಿಷತ್‍ನಲ್ಲಿ ಹೇಳಿದರು. ಕಾಂಗ್ರೆಸ್ ಸದಸ್ಯ ಮಂಜುನಾಥ್ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವರು ನ್ಯಾಯಾಲಯದಲ್ಲಿ ಇದನ್ನು ಪ್ರಶ್ನೆ ಮಾಡಿರುವುದರಿಂದ ಇದು ನ್ಯಾಯಲಾಯದ ವಿಚಾರಣಾ ಹಂತದಲ್ಲಿದೆ. ಇಂದು ನಮ್ಮ ಅಡ್ವಕೇಟ್ ಜನರಲ್ ಹಾಗೂ ಇಲಾಖೆಯ ಅಧಿಕಾರಿಗಳು ಮಾತುಕತೆ ನಡೆಸಿದ್ದು, ನ್ಯಾಯಾಲಯದಿಂದ ಇತ್ಯರ್ಥವಾದ ನಂತರ ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಶೈಕ್ಷಣಿಕ ವರ್ಷ ಆರಂಭವಾಗಿರುವುದರಿಂದ ಆದಷ್ಟು ಶೀಘ್ರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದರಿಂದ ಪಾಠ ಪ್ರವಚನಗಳಿಗೆ ಅನುಕೂಲವಾಗಲಿದೆ ಎಂಬ ಸದಸ್ಯರ ಮನವಿಗೆ ನ್ಯಾಯಾಲಯ ಹಂತದಲ್ಲಿರುವ ಕಾರಣ ನಾವು ಏನೂ ಮಾಡಲು ಸಾಧ್ಯವಿಲ್ಲ. ತೆರವಾದ ನಂತರ ಎಷ್ಟು ಸಾಧ್ಯವೋ ಅಷ್ಟು ಬೇಗ ಕ್ರಮ ಕೈಗೊಳ್ಳುತ್ತೇನೆ ಎಂದರು.
ಸರ್ಕಾರಿ ಶಾಲೆಗಳಿಗೆ ಈಗಾಗಲೇ ಶೇ.85ರಷ್ಟು ಸಮವಸ್ತ್ರಗಳು, ಶೂ, ಸಾಕ್ಸ್ ಪೂರೈಕೆ ಮಾಡಿದ್ದೇವೆ. 1 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಸರ್ಕಾರ ಶಾಲಾ ಮಕ್ಕಳಿಗೆ ವಿದ್ಯಾ ವಿಕಾಸ ಯೋಜನೆಯಡಿ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಉಚಿತವಾಗಿ ನೀಡಲಾಗುತ್ತದೆ. ಎಸ್‍ಎಟಿಎಸ್ ಮಕ್ಕಳ ಸಂಖ್ಯೆಗನುಗುಣವಾಗಿ ಶೂ ಮತ್ತು ಸಾಕ್ಸ್ ಖರೀದಿ ಮಾಡುವಂತೆ ಎಸ್‍ಡಿಎಂಸಿಗಳಿಗೆ ಒಟ್ಟು 125 ಕೋಟಿ ರೂ. ಅನುದಾನ ಮಾಡಿದ್ದೇವೆ ಎಂದು ಹೇಳಿದರು.
1 ರಿಂದ 10ನೇ ತರಗತಿಯ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶೇ.83ರಷ್ಟು ಮಕ್ಕಳಿಗೆ ಸಮವಸ್ತ್ರಗಳು ಈಗಾಗಲೇ ತಲುಪಿದೆ. ಇನ್ನು ಶೇ.17ರಷ್ಟು ಮಾತ್ರ ಬಾಕಿ ಇದ್ದು ಈ ತಿಂಗಳ ಅಂತ್ಯದೊಳಗೆ ಸರಬರಾಜಾಗಲಿದೆ ಎಂದರು.ವಿದ್ಯಾವಿಕಾಸ ಯೋಜನೆಯಡಿ ಪ್ರಸಕ್ತ ಸಾಲಿನ 1ರಿಂದ 10ನೇ ತರಗತಿಯವರಿಗೆ ಪಠ್ಯಪುಸ್ತಕವನ್ನು ಮುದ್ರಿಸಿ ಶಾಲೆಗಳಿಗೆ ಸರಬರಾಜು ಮಾಡಲಾಗುತತ್ತದೆ. ವಿದ್ಯಾರ್ಥಿಗಳ ಬೋಧನೆ, ಪಠ್ಯಕ್ರಮಗಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.
ಶಾಲಾ ಶಿಕ್ಷಕರಿಗೆ ಸಮವಸ್ತ್ರ ನಿಗದಿಪಡಿಸಬೇಕೆಂಬ ಸದಸ್ಯರ ಮನವಿಗೆ ಉತ್ತರಿಸಿದ ಸಚಿವ ಮಧುಬಂಗಾರಪ್ಪ, ಸದ್ಯಕ್ಕೆ ನಮ್ಮ ಮುಂದೆ ಅಂಥಹ ಪ್ರಸ್ತಾವನೆ ಇಲ್ಲ. ಶಿಕ್ಷಕರು ಮಕ್ಕಳ ಪಾಠ ಪ್ರವಚನಗಳಿಗೆ ತೊಂದರೆಯಾಗದಂತೆ ಸಮವಸ್ತ್ರ ಧರಿಸಬೇಕು. ಮುಂದಿನ ದಿನಗಳಲ್ಲಿ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
240ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾತಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಒಂದು ವಿಶೇಷ ಶಿಕ್ಷಕರ ಹುದ್ದೆಯನ್ನು ನೇಮಕಾತಿ ಮಾಡಲಾಗಿದೆ. ಇದರಲ್ಲಿ 258 ಸಂಗೀತ ಶಿಕ್ಷಕರ ಹುದ್ದೆಗಳು ಮಂಜೂರಾತಿಯಾಗಿದ್ದರೆ, ಪ್ರಸ್ತುತ 177 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು 81 ಹುದ್ದೆಗಳು ಖಾಲಿ ಇವೆ.
223 ಚಿತ್ರಕಲೆ ಶಿಕ್ಷಕರ ಹುದ್ದೆಗಳು ಮಂಜೂರಾತಿಯಾಗಿದ್ದರೆ, 152 ಕಾರ್ಯನಿರತರಾಗಿದ್ದು, 71 ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಲು ಆಡಳಿತ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಹೇಳಿದರು. ಅದೇ ರೀತಿ 6 ಅಥವಾ 8ಕ್ಕಿಂತ ಹೆಚ್ಚು ವಿಭಾಗವಿರುವ ಪ್ರೌಢಶಾಲೆಗಳಿಗೆ ವಿಶೇಷ ಶಿಕ್ಷಕರ ಹುದ್ದೆಯನ್ನು ಮಂಜೂರಾತು ಮಾಡಲಾಗಿದೆ. 2328 ಹುದ್ದೆಗಳು ಮಂಜೂರಾತಿಯಾಗಿದ್ದರೆ, ಇದರಲ್ಲಿ 1253 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. 1075 ಹುದ್ದೆಗಳು ಖಾಲಿ ಇವೆ ಎಂದು ಅಂಕಿ ಸಂಖ್ಯೆಗಳ ವಿವರ ನೀಡಿದರು