Document

ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ: ಮೇ10ರಂದು ಮತದಾನ, 13ರಂದು ಫಲಿತಾಂಶ

png 20230329 133210 0000

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು (ಮಾ.29) ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದೆ. ಮೇ10ರಂದು ಮತದಾನ ನಡೆಯಲಿದೆ. ಇಂದಿನಿಂದಲೇ ನೀತಿಸಂಹಿತೆ ಜಾರಿ ಮಾಡಿ ಆದೇಶ ಹೊರಡಿಸಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.

ದೆಹಲಿಯ ವಿಜ್ಞಾನ ಭವನದಲ್ಲಿ ಚುನಾವಣಾ ವೇಳಾಪಟ್ಟಿ ಬಿಡುಗಡೆ ವಿಚಾರವಾಗಿ ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ಇಂದು (ಬುಧವಾರ) ಸುದ್ದಿಗೋಷ್ಠಿ ನಡೆಸಿದರು. “ದಿವ್ಯಾಂಗ ಹಾಗೂ 80 ವರ್ಷ ಮೇಲ್ಪಟ್ಟ ಮತದಾರರು ಮನೆಯಲ್ಲೇ ಕುಳಿತು ಮತದಾನ ಮಾಡಬಹುದು. ದೇಶದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಯತ್ನ ಮಾಡಲಾಗುತ್ತಿದೆ” ಎಂದು ಅವರು ತಿಳಿಸಿದರು.

ರಾಜ್ಯ ವಿಧಾನಸಭಾ ಚುನಾವಣೆಯ ಅಧಿಸೂಚನೆ ಏಪ್ರಿಲ್ 13ರಂದು ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ ಏಪ್ರಿಲ್ 20, ನಾಮಪತ್ರ ಪರಿಶೀಲನೆ ಏ.21ರಂದು ನಡೆಯಲಿದೆ. ನಾಮಪತ್ರ ಹಿಂಪಡೆಯುವ ಕೊನೆಯ ದಿನಾಂಕ ಏ.24ರಂದು ನಿಗದಿ ಮಾಡಲಾಗಿದೆ.

ಕರ್ನಾಟಕದಲ್ಲಿ 5,21,73579 ಒಟ್ಟು ಮತದಾರರಿದ್ದು, 2, 62,42,561 ಪುರುಷರು, 2,59,26,319 ಮಹಿಳೆಯರು, 4,699 ಟ್ರಾನ್ಸ್‌ಜೆಂಡರ್‌ಗಳು ಹಾಗೂ 5.55 ಲಕ್ಷ ದಿವ್ಯಾಂಗ ಮತದಾರರಿದ್ದಾರೆ. 9,17,241 ಮಂದಿ ಮೊದಲ ಸಲ ಮತದಾನ ಮಾಡುತ್ತಿದ್ದಾರೆ ಎಂದು ತಿಳಿಸಿದರು.

58,282 ಒಟ್ಟು ಮತಗಟ್ಟೆಗಳ ಸ್ಥಾಪನೆ ಮಾಡಲಾಗುತ್ತಿದೆ. ಒಂದೊಂದು ಮತಗಟ್ಟೆಗೆ 883 ಮಂದಿ ಮತದಾರರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ನಗರಪ್ರದೇಶದಲ್ಲಿ 24,063, ಗ್ರಾಮೀಣ ಭಾಗದಲ್ಲಿ 34,219 ಹಾಗೂ 1320 ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಇನ್ನು ಯುವಕರಿಗಾಗಿ 224 ಮತಗಟ್ಟೆಗಳ ಸ್ಥಾಪನೆ ಮಾಡಲಾಗುತ್ತದೆ ಎಂದು ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.

Document

Leave a Reply

Your email address will not be published. Required fields are marked *