
Janataa24 NEWS DESK
ಕೊಲೆ ಪ್ರಕರಣದಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಮೊಹಮ್ಮದ್ ಫೈಜಲ್ ಅವರ ಶಿಕ್ಷೆಯನ್ನು ಕೇರಳ ಹೈಕೋರ್ಟ್ ಜನವರಿ 25ರಂದು ಅಮಾನತ್ತುಗೊಳಿಸಿತ್ತು. ಈ ಆದೇಶದ ವಿರುದ್ಧ ಲಕ್ಷದ್ವೀಪ ಆಡಳಿತವು ಸುಪ್ರೀಂ ಕೋರ್ಟ್‌ಗೆ ಮೇಲ್ಮನ ಸಲ್ಲಿಸಿತ್ತು. ಇಂದು ಸದರಿ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರ ಪೀಠವು “ಪ್ರಕರಣವೊಂದರಲ್ಲಿ ಜನಪ್ರತಿನಿಧಿಗಳಿಗೆ ಶಿಕ್ಷೆ ನೀಡಿದ ನಂತರ ಸಂಸತ್ತಿನ ಸದಸ್ಯರು ತನ್ನಿಂದತಾನೇ ಅನರ್ಹಗೊಳ್ಳುವುದು “ಅತ್ಯಂತ ಕಠಿಣ” ಕ್ರಮವಾಗಿದೆ” ಎಂದು ಮೌಖಿಕವಾಗಿ ಹೇಳಿದೆ ಎಂದು ಸುಪ್ರೀಂ ಕೋರ್ಟ್ ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ಕಳೆದ ಮಾರ್ಚ್ 23 ರಂದು ಗುಜರಾತಿನ ನ್ಯಾಯಾಲಯವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಆನಂತರ ರಾಹುಲ್ ಗಾಂಧಿ ಅವರು ಸಂಸತ್ತಿನಿಂದ ಅನರ್ಹಗೊಂಡಿದ್ದಾರೆ. ಇದೀಗ ದೇಶದಲ್ಲಿ ರಾಹುಲ್ ಗಾಂಧಿ ಅನರ್ಹತೆ ಬಗ್ಗೆ ಚರ್ಚೆಯಾಗುತ್ತಿರುವಾಗ ಈ ಅವಲೋಕನವು ಮಹತ್ವದ್ದಾಗಿದೆ.
ಕೇರಳದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಮೊಹಮ್ಮದ್ ಫೈಜಲ್ ಅವರು ಕ್ರಿಮಿನಲ್ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಮೊಹಮ್ಮದ್ ಫೈಝಲ್ ಅವರನ್ನು ಕಳೆದ ಜನವರಿಯಲ್ಲಿ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.
ಪ್ರಜಾಪ್ರತಿನಿಧಿ ಕಾಯಿದೆ 1951ರ ಅಡಿಯಲ್ಲಿ, ಶಾಸಕ/ಸಂಸದರು ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆಗೆ ಒಳಗಾದರೆ, ಶಿಕ್ಷೆಯ ದಿನಾಂಕದಿಂದ ಜೈಲು ಶಿಕ್ಷೆಯ ಅವಧಿ ಮುಗಿದ ಆರು ವರ್ಷಗಳವರೆಗೆ ಅನರ್ಹರಾಗುತ್ತಾರೆ. ಯಾವುದೇ ಚುನಾವಣೆಗೂ ಸ್ಫರ್ಧಿಸಲು ಸಾಧ್ಯವಾಗುವುದಿಲ್ಲ.
ಕೇರಳ ಹೈಕೋರ್ಟ್ ಆದೇಶದ ಆಧಾರದ ಮೇಲೆ ಫೈಝಲ್ ಅವರ ಸದಸ್ಯತ್ವವನ್ನು ಮರುಸ್ಥಾಪಿಸುವಂತೆ ಕೋರಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ನಿಗದಿಪಡಿಸುವ ಮುನ್ನವೇ ಬುಧವಾರದಂದು ಫೈಝಲ್ ಅವರ ಅನರ್ಹತೆಯನ್ನು ಹಿಂತೆಗೆದುಕೊಳ್ಳಲಾಯಿತು.
ಫೈಝಲ್ ಅವರ ಮನವಿಯ ವಿಚಾರಣೆ ನಡೆಸಿದ ಪೀಠವು, ಶಾಸಕರಿಗೆ/ಸಂಸದರಿಗೆ ಶಿಕ್ಷೆ ವಿಧಿಸುವಾಗ ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕು ಎಂದು ಹೇಳಿದೆ.