Janataa24 NEWS DESK

ಪಾವಗಡ: ಗಡಿನಾಡು ತಾಲೂಕ್ ಕೇಂದ್ರ ದಲ್ಲಿ ನವೆಂಬರ್-7,8 ಮತ್ತು 9 ರ ಮೂರು ದಿನಗಳ ಕಾಲ ಕರ್ನಾಟಕ ಇತಿಹಾಸ ಅಕಾಡೆಮಿಯ 37 ನೇ ರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಡಾ. ವೇವರಕೊಂಡಾರೆಡ್ಡಿ ತಿಳಿಸಿದರು.
ಪಟ್ಟಣದ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ನಡೆಯುವ ಸಮ್ಮೇಳನದ ಅಂಗವಾಗಿ ಭಾನುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ 37 ವರ್ಷಗಳಿಂದ ನಿರಂತರವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಸಮ್ಮೇಳನಗಳನ್ನು ಆಯೋಜಿಸಿಕೊಂಡು ಬರುತ್ತಿದೆ ನಮ್ಮ ಚಟುವಟಿಕೆಗಳಿಗೆ ಅನೇಕ ಸಂಘ ಸಂಸ್ಥೆ, ವಿಶ್ವವಿದ್ಯಾಲಯಗಳು ಮಠಗಳು ದೇವಾಲಯ ಟ್ರಸ್ಟ್ ಗಳು ಸಹಕಾರ ನೀಡುತ್ತಿವೆ ಈ ವರ್ಷದ ಸಮ್ಮೇಳನ ಪಾವಗಡದ ಎಸ್‌ಎಸ್‌ಕೆ ಸಂಘದ ಸಹಕಾರದೊಂದಿಗೆ ಪಾವಗಡದಲ್ಲಿ ನಡೆಯುತ್ತಿದ್ದು ಗಡಿ ಭಾಗ ಸೇರಿದಂತೆ ರಾಜ್ಯದ ಇತಿಹಾಸದ ಬಗ್ಗೆ ಹೆಚ್ಚು ಬೆಳಕು ಚೆಲ್ಲಲಿದೆ.
ಇತಿಹಾಸದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ 11 ಮಂದಿಗೆ ಇಲ್ಲಿನ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹುಬ್ಬಳ್ಳಿಯ ಶಾಸನ ತಜ್ಞೆ ಹಾಗೂ ಸಂಶೋಧಕಿ ಹನುಮಾಕ್ಷಿ ಗೋಗಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದರು.

ಸಂಶೋಧನೆ ಸಾಹಿತ್ಯದ ಬೇರು, ಆದರೆ ಸಾಹಿತಿಗಳಿಗೆ ಸಿಗುತ್ತಿರುವ ಆದ್ಯತೆ ಸಂಶೋಧಕರಿಗೆ ಸಿಗುತ್ತಿಲ್ಲ. ಆದರೂ ಸಂಶೋಧಕರು ತಮ್ಮ ಕೆಲಸವನ್ನು ಎಲ್ಲೆಡೆ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಗುರುತಿಸಿ ಗೌರವಿಸುವ ಕೆಲಸವನ್ನು ಅಕಾಡೆಮಿ ಮಾಡುತ್ತಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಕೆ ಎಲ್ ರಾಜಶೇಖರ್ ಮಾತನಾಡಿ, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ, ಅವುಗಳ ಬಗ್ಗೆ ಜಾಗೃತಿ ಮೂಡಿಸುವುದು, ಸಂಶೋಧಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದೆ. ಲೇಖಕರು, ಸಂಶೋಧಕರು ಸೇರಿದಂತೆ ಹಲವರು ವಿವಿಧ ವಿಚಾರಗಳ ಬಗ್ಗೆ ಸಮ್ಮೇಳನದಲ್ಲಿ ಸುಮಾರು 150ಕ್ಕೂ ಹೆಚ್ಚು ಪ್ರಬಂಧ ಮಂಡಿಸಲಿದ್ದಾರೆ.

ಸಮ್ಮೇಳನದಲ್ಲಿ ಭಾಗವಹಿಸುವ ಪದವಿ, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಒಒಡಿ ಸವಲತ್ತು ಕಲ್ಪಿಸಲಾಗುವುದು ಎಂದರು.
ಎಸ್ ಎಸ್ ಕೆ ಸಂಘದ ಅಧ್ಯಕ್ಷ ಆನಂದರಾವ್, ಮಾತನಾಡಿ ಸಮ್ಮೇಳನ ನಡೆಸುವ ಪ್ರತಿ ಸ್ಥಳಗಳಲ್ಲಿನ ಸ್ಮಾರಕಗಳನ್ನು ಉಳಿಸುವ ಕೆಲಸವಾಗಬೇಕು. ಈ ಬಗ್ಗೆ ಅಕಾಡೆಮಿಗೆ ಪ್ರತಿಯೊಬ್ಬರು ಸಹಕರಿಸಬೇಕು.
ಪ್ರಸ್ತುತ ರಾಜಕೀಯದ ಕಾರಣದಿಂದ ಇತಿಹಾಸವನ್ನೇ ತಿರುಚಲಾಗುತ್ತಿದೆ. ಇತಿಹಾಸವನ್ನು ಬದಲಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ . ಆದಾಗಿಯೂ ಸ್ಥಳಿಯ ಇತಿಹಾಸ ಮಹತ್ವವನ್ನು ಹೊಂದಿದ್ದು ಅದನ್ನು ಬೆಳಕಿಗೆ ತರುವಲ್ಲಿ ಅಕಾಡೆಮಿ ಪಾತ್ರ ದೊಡ್ಡದಾಗಿದೆ ಎಂದು ತಿಳಿಸಿದರು.
ಇತಿಹಾಸ ಸಂಶೋಧಕ ವಿ ಆರ್ ಚೆಲುವರಾಜನ್ ಮಾತನಾಡಿ ತಾಲೂಕಿನಲ್ಲಿ ಐತಿಹಾಸಿಕ ಸ್ಮಾರಕಗಳು ನಿರಂತರವಾಗಿ ನಾಶವಾಗುತ್ತಿದೆ ಅವುಗಳ ರಕ್ಷಣೆಗೆ ಪ್ರಾಚ್ಯ ವಸ್ತು ಇಲಾಖೆಗೆ ಮೊರೆ ಹೋದರು ಯಾವುದೇ ಪ್ರಯೋಜನ ಆಗಿರುವುದಿಲ್ಲ ದಕ್ಷಿಣದ ಹಂಪೆ ಎಂದೇ ಪ್ರಸಿದ್ಧಿ ಪಡೆದಿರುವ ನಿಡಗಲ್ ಪ್ರಾಚ್ಯ ವಸ್ತು ಇಲಾಖೆಯ ಲೆಕ್ಕದಲ್ಲಿ ಇಲ್ಲ ಆದಾಗಿ ಅಲ್ಲಿನ ಅವಶೇಷಗಳ ರಕ್ಷಣೆ ಆಗುತ್ತಿಲ್ಲ ಸ್ಥಳೀಯ ಜನತೆಯ ಸಹಕಾರದಿಂದ ಒಂದೆರಡು ಗುಡಿ ಗೋಪುರಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ ಜನತೆಯ ಸಹಕಾರ ದೊರೆತರೆ ಈ ಕಾರ್ಯ ಎಲ್ಲೆಡೆ ಮುಂದುವರಿಸಬಹುದು ಎಂದರು.
ಎಸ್ ಎಸ್ ಕೆ ಸಂಘದ ಪ್ರಧಾನ ಕಾರ್ಯದರ್ಶಿ ಪಿವಿ ಸುಬ್ಬುನರಸಿಂಹ ಖಜಾಂಚಿ ವೈ ಆರ್ ಮೋಹನ್, ಅಕಾಡೆಮಿಯ ಕಾರ್ಯಕಾರಿ ಸಮಿತಿಯ ಜಿ ಕೆ ದೇವರಾಜಸ್ವಾಮಿ, ಅಕಾಡೆಮಿಯ ಸದಸ್ಯ ಹೊ ಮ ನಾಗರಾಜು, ರಮೇಶ್ ಬಾಬು, ಸಹಾಯಕ ಪ್ರಾದ್ಯಾಪಕಿ ವೇದಲಕ್ಷ್ಮಿ ಉಪಸ್ಥಿತರಿದ್ದರು.
ವರದಿ
ಪಾವಗಡ: ಇಮ್ರಾನ್ ಉಲ್ಲಾ.