Janataa24 NEWS DESK

ಬೆಂಗಳೂರು: ಕನ್ನಡ ನಾಮಫಲಕ ಹೋರಾಟದಲ್ಲಿ ಜೈಲು ಸೇರಿದ್ದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಬಿಡುಗಡೆಯಾಗಿ ಮತ್ತೆ ಜೈಲು ಸೇರಿ ಇದೀಗ ಮತ್ತೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಜೈಲಿನಿಂದ (Jail) ರಿಲೀಸ್ ಆದ ಬಳಿಕ ನಾರಾಯಣ ಗೌಡರು (KaRaVe Narayana Gowda) ತಮ್ಮ ಕಾರ್ಯಕರ್ತರ ಬಳಿ ಕ್ಷಮೆ ಕೇಳಿದ್ದಾರೆ.
ಬಿಡುಗಡೆಯ ಬಳಿಕ ಫೇಸ್ ಬುಕ್ ಮೂಲಕ ಲೈವ್ ಬಂದ ಕರವೇ ಅಧ್ಯಕ್ಷ, ಆರೋಗ್ಯದ ಸಮಸ್ಯೆಯಿಂದ ಇಂದು ಯಾರ ಜೊತೆಯೂ ಮಾತನಾಡೋಕೆ ಆಗ್ಲಿಲ್ಲ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ನನ್ನ ದೇಹದ ಕೊನೆಯ ಹನಿ ರಕ್ತ ಇರುವವರೆಗೂ ಕನ್ನಡದ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕನ್ನಡ ನಾಮಫಲಕ ಆಂದೋಲನ ಯಶಸ್ವಿಯಾಗಿದೆ. ಸರ್ಕಾರ ಈ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿದೆ. ಇದು ಕನ್ನಡಿಗರ ಜಯ, ಕರವೇಯ ಜಯ. ಕಾನೂನಿನ ಚೌಕಟ್ಟಿನೊಳಗೆ ಈ ಹೋರಾಟ ಮುಂದುವರಿಸಿಕೊಂಡು ಹೋಗಬೇಕೆನ್ನುವುದು ನಮ್ಮ ಉದ್ದೇಶವಾಗಿತ್ತು ಎಂದು ತಿಳಿಸಿದರು.
ಕೆಲವೊಮ್ಮೆ ಹೋರಾಟದಲ್ಲಿ ತೊಡಕಾಗುವುದು ಸಹಜ. ಪ್ರಾಮಾಣಿಕ ಹೋರಾಟದಲ್ಲಿ ಹೀಗೆಲ್ಲಾ ಆಗುತ್ತೆ. ಈಗ ಹದಿನೈದು ದಿನ ನಾನು ಮತ್ತು ನಮ್ಮ ಕಾರ್ಯಕರ್ತರು ಜೈಲು ಶಿಕ್ಷೆ ಅನುಭವಿಸಿದ್ದೇವೆ. ಇನ್ನೂ ಅನೇಕ ಮೊಕದ್ದಮೆಗಳಿವೆ. ಅದಕ್ಕಾಗಿ ಕಾನೂನು ಹೋರಾಟ ಮಾಡುತ್ತೇವೆ ಎಂದರು.
ಇದೇ ವೇಳೆ ನಾರಾಯಣ ಗೌಡರು ಕನ್ನಡ ಪರ ಚಳುವಳಿಗಾರರು, ಕರವೇ ಮುಖಂಡರು ಹಾಗೂ ಮಾಧ್ಯಮದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.