Janataa24 NEWS DESK

ಪಾವಗಡ: ತುಮಕೂರಿನ ಗುಡಿಸಲು ವಾಸಿಗಳಿಗೆ ಪೂಜ್ಯ ಸ್ವಾಮಿ ಜಪಾನಂದಜೀವರು ತಮ್ಮ ತಂಡದವರೊಂದಿಗೆ ನೂತನ ಕಂಬಳಿಗಳು ಹಾಗೂ ಸ್ವೆಟರ್ಗಳು ಮತ್ತು ಮಕ್ಕಳಿಗೆ ಉಲ್ಲನ್ ಹೊದಿಕೆಗಳನ್ನು ನೀಡಿದರು.

ತುಮಕೂರಿನ ಸುಮಾರು ಐದು ಜಾಗಗಳಲ್ಲಿ ಅಂದರೆ ರಿಂಗ್ ರೋಡ್ ಹಾಗೂ ಬಡ್ಡಿಹಳ್ಳಿ ಪ್ರಾಂತ್ಯದ ಐದು ಕೊಳಚೆ ಪ್ರದೇಶದ ಕಾಲೋನಿಗಳಲ್ಲಿ ಮುಂಜಾನೆ ಚುಮುಚುಮು ಚಳಿಯ ಮಧ್ಯೆ ಪೂಜ್ಯ ಸ್ವಾಮಿ ಜಪಾನಂದಜೀ ರವರು ತಮ್ಮ ತಂಡದವರೊಂದಿಗೆ ನೂತನ ಕಂಬಳಿಗಳು ಹಾಗೂ ಸ್ವೆಟರ್ಗಳು ಮತ್ತು ಮಕ್ಕಳಿಗೆ ಉಲ್ಲನ್ ಹೊದಿಕೆಗಳನ್ನು ನೀಡಿದರು.

ದೂರದ ರಾಯಚೂರು ಮಾನ್ವಿ, ಯಾದಗಿರಿ ,ಪ್ರದೇಶಗಳಿಂದ ಜೀವನೋಪಾಯಕ್ಕೆ ಕೂಲಿ ಮಾಡುವಂತಹ ಜನರು ಇಲ್ಲಿ ಗುಡಿಸಲು ವಾಸಿಸುತ್ತಿದ್ದು ಈ ಹಿಂದೆಯೂ ಈ ಎಲ್ಲ ಗುಡಿಸಲು ವಾಸಿಗಳಿಗೆ ದೊಡ್ಡ ಪ್ರಮಾಣದ ಟಾರ್ ಪಾಲು ಬಟ್ಟೆ ಇತ್ಯಾದಿಯನ್ನು ನೀಡಿದ್ದು ಇಲ್ಲಿ ಸ್ಮರಿಸಬಹುದಾಗಿದೆ. ಅದೇ ರೀತಿಯಲ್ಲಿ ಕೋವಿಡ್ ಸಂದರ್ಭದಲ್ಲಿ ಇಲ್ಲಿಯ ಜನತೆಗೆ ಸಹಾಯ ಹಸ್ತವನ್ನು ನೀಡಿದ್ದು ಜನರು ಇನ್ನೂ ಮನಸ್ಸಿನಲ್ಲಿ ಜ್ಞಾಪಕದಲ್ಲಿ ಇಟ್ಟುಕೊಂಡಿರುವುದು ಮುಗ್ಧ ಹಳ್ಳಿಯ ಜನರ ಹೃದಯವಂತಿಕೆಗೆ ಕೈಗಡಿಯಾಗಿದೆ. ವೃದ್ಧರು ಮುಖ್ಯವಾಗಿ ಯಾವುದೇ ರೀತಿಯ ಕೆಲಸ ಕಾರ್ಯಗಳನ್ನು ಮಾಡದಿದ್ದವರು ಚಳಿಯಲ್ಲಿ ಬೆಚ್ಚನೆಯ ಹೊದಿಕೆಯನ್ನು ಪಡೆದು ಕೃತಾರ್ಥರಾದರು ಎನ್ನಬಹುದು.

ಈ ಸಂದರ್ಭದಲ್ಲಿ ಹಿರಿಯ ಸಂಪಾದಕರು ಹಾಗೂ ರಾಷ್ಟ್ರದ ಮಾಧ್ಯಮದ ಪದಾಧಿಕಾರಿಗಳು ಆದ ಶ್ರೀ ನಾಗಣ್ಣ ರವರು ಮತ್ತು ಪ್ರಜಾ ಪ್ರಗತಿಯ ಅಧಿಕಾರಿ ವರ್ಗದವರು ಹೊಸದಿಗಂತದ ಸ್ಥಳೀಯ ವರದಿಗಾರರು ದೂರದರ್ಶನದ ವರದಿಗಾರರು ಹಾಗೂ ನಿವೃತ್ತ ಪ್ರಾಂಶುಪಾಲರಾದ ಶ್ರೀ ಮರಿಬಸಪ್ಪ ಮತ್ತು ಅವರ ಸಂಗಡಿಗರು ಹೀಗೆ ಪೂಜ್ಯ ಸ್ವಾಮೀಜಿಯವರಿಗೆ ಚುಮುಚುಮು ಚಳಿಯಲ್ಲಿಯೂ ಸಹ ಈ ಕಾಲೋನಿಗಳಿಗೆ ಭೇಟಿ ಇತ್ತು ನೂತನ ಉಲ್ಲನ್ ಕಂಬಳಿಗಳನ್ನು ವಿತರಿಸಲಾಯಿತು .ಈ ಯೋಜನೆಗೆ ಸಹಕಾರ ನೀಡಿದ ಸಂಯೋಜಕರಾದ ಶ್ರೀ ನಾಗರಾಜಯ್ಯನವರು ಉಪಸ್ಥಿತರಿದ್ದರು.
ಚಳಿಯ ಮಧ್ಯೆಯು ಬೆಳಗ್ಗೆ 5:00ಗೆ ಪಾವಗಡವನ್ನು ಬಿಟ್ಟು ತುಮಕೂರಿಗೆ ಬಂದ ಕಾರಣ ಇಷ್ಟೇ ಕೂಲಿ ಮಾಡುವವರು ಕೂಲಿಗಾಗಿ ಆರು ಗಂಟೆಗೆ ತಮ್ಮ ತಮ್ಮ ಕೆಲಸಗಳಿಗೆ ಹೋಗುವುದು ಎಲ್ಲರಿಗೂ ತಿಳಿದ ವಿಚಾರ ಆ ಸಂದರ್ಭದಲ್ಲಿ ಇವರುಗಳನ್ನು ಅಲ್ಲಿಯೇ ಇರಿಸಿ ಅವರಿಗೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದ್ದಲ್ಲದೆ ಸಂಕ್ರಾಂತಿಯ ಶುಭಾಶಯ ಕೋರಿ ಪ್ರತಿಯೊಬ್ಬರಿಗೂ ಎಳ್ಳು ಮತ್ತು ಬೆಲ್ಲದ ಪ್ಯಾಕೆಟ್ ಅನ್ನು ಹಂಚಲಾಯಿತು.
ಜೊತೆಯಲ್ಲಿಯೇ ಮಕ್ಕಳಿಗೆ ಬಿಸ್ಕೆಟ್ ಪಾಕೆಟ್ ಗಳನ್ನು ವಿತರಿಸಲಾಯಿತು. ಒಟ್ಟಿನಲ್ಲಿ ಸೇವೆಯನ್ನು ಮಾಡಲು ಕಷ್ಟದಲ್ಲಿರುವವರನ್ನು ಹುಡುಕಿಕೊಂಡು ನೂರಾರು ಕಿಲೋಮೀಟರ್ ದೂರ ಪ್ರಯಾಣ ಬೆಳೆಸಿ ಕಳೆದ ಮೂರು ದಶಕಗಳಿಂದಲೂ ಏಕಪ್ರಕಾರವಾಗಿ ಸೇವಾ ಯಜ್ಞವನ್ನು ನಡೆಸುತ್ತಿರುವ ಶ್ರೀ ರಾಮಕೃಷ್ಣ ಸೇವಾಶ್ರಮದ ಕಾರ್ಯವೈಕರಿಗೆ ಸಾರ್ವಜನಿಕರು ಅಧಿಕಾರಿಗಳು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದ ಅಲ್ಲದೆ ದಿನೇ ದಿನೇ ಟೀಮ್ ವಿವೇಕಾನಂದ ಸಂಘಕ್ಕೆ ಸೇರುವ ಅಧಿಕಾರಿಗಳು, ನಿವೃತ್ತ ಪ್ರಾಂಶುಪಾಲರುಗಳು, ಬ್ಯಾಂಕ್ ಅಧಿಕಾರಿಗಳು, ಹಾಗೂ ಸಾಮಾನ್ಯ ಜನರು ಹೆಚ್ಚುತ್ತಿದ್ದು ಪೂಜ್ಯ ಸ್ವಾಮೀಜಿಯವರಿಗೆ ನಿರಂತರವಾಗಿ ಸ್ವಯಂಸೇವಕರ ತಂಡವೇ ಪ್ರತಿಯೊಂದು ಪ್ರದೇಶದಲ್ಲಿಯೂ ನಿರ್ಮಾಣವಾಗುತ್ತಿರುವುದು ನಿಜಕ್ಕೂ ಆಶ್ಚರ್ಯಕರ.
ಸ್ವಾಮಿ ವಿವೇಕಾನಂದರ ಧ್ಯೇಯಗಳನ್ನು ಅನುಷ್ಠಾನ ರೂಪಕ್ಕೆ ತರಲು ಹೊರಟಿರುವ ಶ್ರೀ ರಾಮಕೃಷ್ಣ ಸೇವಾಶ್ರಮ ನಿಜಕ್ಕೂ ಸರಿಯಾದ ಅರ್ಥದಲ್ಲಿ ಸೇವೆಯನ್ನು ಸಲ್ಲಿಸುತ್ತಾ ಬರುತ್ತಿದೆ.
ವರದಿ: ಇಮ್ರಾನ್ ಉಲ್ಲಾ.ಪಾವಗಡ
