ತುಮಕೂರು ವರೆಗೆ ಮೆಟ್ರೋ ವಿಸ್ತರಣೆ, ಜ29 ಕ್ಕೆ ತುಮಕೂರು ವಿವಿ ಉದ್ಘಾಟನೆ: ಡಾ.ಜಿ.ಪರಮೇಶ್ವರ್

Janataa24 NEWS DESK

banner1 mob
ತುಮಕೂರಿನವರೆಗೆ ಮೆಟ್ರೋ ವಿಸ್ತರಣೆ ಸಾಂದರ್ಭಿಕ ಚಿತ್ರ

ತುಮಕೂರು: ‘ನಮ್ಮ ಮೆಟ್ರೋ’ ತುಮಕೂರಿಗೆ ವಿಸ್ತರಣೆಗೆ ಸಿದ್ಧತೆ ನಡೆದಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಪಿಆರ್‌ಗೆ ಸೂಚನೆ ನೀಡಿದ್ದು, ಆ ಬಳಿಕ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅನುಮತಿ ಸಿಕ್ಕಲ್ಲಿ ಯೋಜನೆ ಕಾರ್ಯಗತವಾಗಲಿದೆ ಎಂದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ” ತುಮಕೂರು ವೇಗವಾಗಿ ಬೆಳೆಯುತ್ತಿದೆ. ಮೆಟ್ರೋವನ್ನು ತುಮಕೂರಿಗೆ ತರುವ ಚಿಂತನೆಯಿದೆ. ಈಗಾಗಲೇ ಮುಖ್ಯಮಂತ್ರಿಗಳು ಡಿಪಿಆರ್‌ಗೆ ಸೂಚನೆ ಕೊಟ್ಟಿದ್ದಾರೆ. ಜ.29ರಂದು ಜಿಲ್ಲೆಗೆ ಬಂದಂತಹ ಸಂದರ್ಭದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಯೋಜನೆ ಅನುಷ್ಠಾನಕ್ಕೆ ಅವರಲ್ಲಿ ಮನವಿ ಮಾಡುತ್ತೇವೆ ” ಎಂದರು.

” ಕೇಂದ್ರ ಮತ್ತು ರಾಜ್ಯ ಸರಕಾರದ ಅನುಮತಿ ಸಿಕ್ಕರೆ ಸಾಕು. ಹಣಕಾಸಿನ ವಿಚಾರದಲ್ಲಿ ಸಮಸ್ಯೆ ಆಗದು. ಪಿಪಿಪಿ ಮೂಲಕ ಅನುಷ್ಠಾನಗೊಳಿಸುವ ಅವಕಾಶವಿದೆ ” ಎಂದು ಸಚಿವರು ಹೇಳಿದರು.

ನಗರಕ್ಕೆ 500 ಕೋಟಿ ರೂ. ಬೇಡಿಕೆ

ಸ್ಮಾರ್ಟ್ ಸಿಟಿ ತುಮಕೂರು


” ಸ್ಮಾರ್ಟ್‌ ಸಿಟಿ ಯೋಜನೆ ಯಾರಾರ‍ಯರೋ ನಾನು ಮಾಡಿಸಿದೆ ನಾನು ಮಾಡಿಸಿದೆ ಎಂದು ತಿರುಗಾಡುತ್ತಿದ್ದಾರೆ. ಯಾರೇ ಮಾಡಿಸಲಿ ಆದರೆ ಆರೂವರೆ ವಾರ್ಡ್‌ಗಳಲ್ಲಿ ಮಾತ್ರ ಯೋಜನೆ ಕಾಮಗಾರಿಗಳು ನಡೆದಿವೆ. ಇನ್ನುಳಿದ 29 ವಾರ್ಡ್‌ಗಳು ಸ್ಮಾರ್ಟ್‌ ಆಗಲು ಸಾಧ್ಯವಾಗಿಲ್ಲ. ಹೀಗಾಗಿ ತುಮಕೂರು ನಗರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳಲ್ಲಿ 500 ಕೋಟಿ ರೂ. ಕೇಳಲಾಗುವುದು. ಸರಕಾರ ಗ್ಯಾರಂಟಿಗೆ ಖರ್ಚು ಮಾಡುವ ಜವಾಬ್ದಾರಿ ಇರುವುದರಿಂದ, ಸಿಎಂ ಏನು ಮಾಡುತ್ತಾರೆ ಗೊತ್ತಿಲ್ಲ. ಆದರೆ ನಾವು ಕೇಳುವುದು ಕೇಳುತ್ತೇವೆ ” ಎಂದರು.

ವಿವಿಗೆ ಹಣಕ್ಕೆ ಬೇಡಿಕೆ.

ತುಮಕೂರು ವಿಶ್ವವಿದ್ಯಾನಿಲಯ


ತುಮಕೂರು ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್‌ ಅನ್ನು ಜ.29ರಂದು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದು, ವಿಶ್ವವಿದ್ಯಾಲಯಕ್ಕೆ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡುವಂತೆ ಕೂಡ ಕಾರ್ಯಕ್ರಮದಲ್ಲಿಮನವಿ ಮಾಡುತ್ತೇವೆಂದರು.

ಸದ್ಯ ತುಮಕೂರಲ್ಲಿ ಕ್ರೀಡಾ ವಿಶ್ವವಿದ್ಯಾಲಯದ ಪ್ರಸ್ತಾಪ ಕೈ ಬಿಡಲಾಗಿದೆ. ಕ್ರಿಕೆಟ್‌ ಸ್ಟೇಡಿಯಂ ಬೇಡಿಕೆಯೂ ಇದೆ, ನಮ್ಮ ಪ್ರಯತ್ನವೂ ಇದೆ. ಹಿಂದೆ ಗಾರೆ ನರಸಯ್ಯನ ಕಟ್ಟೆಯಲ್ಲಿಮಾಡಲು ಉದ್ದೇಶಿಸಲಾಗಿತ್ತು. ಆದರೆ ಕೆರೆ ಜಾಗ ಆಗಿದ್ದರಿಂದ ಆಗಿಲ್ಲ. ಬೇರೆ ಕಡೆ ಜಾಗ ನೋಡಲಾಗುತ್ತಿದ್ದು, ಕೆಸಿಎ ಅವರು ಒಪ್ಪಿದ ಕಡೆ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣವಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಉದ್ಘಾಟನೆ

ತುಮಕೂರಿನ ನೂತನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ


ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣವನ್ನೂ ಜ.29ಕ್ಕೆ ಉದ್ಘಾಟನೆ ಮಾಡುತ್ತೇವೆ ಎಂದು ಹೇಳಿದ ಡಾ.ಜಿ.ಪರಮೇಶ್ವರ್‌, ಸಂಪೂರ್ಣ ಕಾಮಗಾರಿ ಮುಗಿಯದಿದ್ದರೂ ಉದ್ಘಾಟನೆ ಮಾಡುತ್ತೇವೆ. ರಾಮ ಮಂದಿರದ ದಾಟಿಯಲ್ಲಿಎಂದು ಹಾಸ್ಯ ಚಟಾಕಿ ಹಾರಿಸುತ್ತಾ ನುಡಿದರು. ಸಿಎಂ ಪದೇ ಪದೆ ಬರಲು ಸಾಧ್ಯವಾಗದ ಕಾರಣ ಉದ್ಘಾಟಿಸುತ್ತಿದ್ದೇವೆ ಎಂದರು.

ಶೆಟ್ಟರನ್ನು ಸಿಎಂನೇ ಮಾಡ್ಬೇಕಿತ್ತು


ಬಿಜೆಪಿಯಲ್ಲಿಅವಮಾನ ಮಾಡಿದ್ದಾರೆಂದು ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ಗೆ ಬಂದರು. ಅವರಿಗೆ ಅದ್ಧೂರಿ ಸ್ವಾಗತವನ್ನೇ ಮಾಡಿದ್ದೆವು. ಟಿಕೆಟ್‌ ಕೊಟ್ಟೆವು. ಆದರೆ ಅವರು ಸೋತರು. ಆದರೂ ಅವರನ್ನು ಗೌರವಿಸಿ ಪಕ್ಷ ವಿಧಾನ ಪರಿಷತ್‌ ಸದಸ್ಯತ್ವ ನೀಡಿತು. ಅವರಿಗೆ ಸಚಿವ ಸ್ಥಾನ ನೀಡಲು ಆಗಿಲ್ಲ. ಅವರು ಹಿಂದೆ ಸಿಎಂ ಆಗಿದ್ದರಿಂದ ಅವರನ್ನು ಸಿಎಂನೇ ಮಾಡಬೇಕಿತ್ತು ಎಂದು ಡಾ.ಜಿ.ಪರಮೇಶ್ವರ್‌ ಹೇಳಿದರು.

ರಾಜಣ್ಣ ಹೇಳಿದ್ರು ಅಂದ್ರೆ ಮುಗೀತಲ್ಲಾ!


ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಕಾಂಗ್ರೆಸ್‌ಗೆ ಯಾವಾಗ ವಾಪಸ್ಸಾಗುತ್ತಾರೆಂಬುದು ಗೊತ್ತಿಲ್ಲ. ಪಕ್ಷದ ಅಧ್ಯಕ್ಷರೇ ಸುಪ್ರೀಂ, ಅವರು ತೀರ್ಮಾನ ಮಾಡುತ್ತಾರೆ. ನಾನು ತುಮಕೂರು ಜಿಲ್ಲಾಉಸ್ತುವಾರಿ ಸರ್ಕಾರಕ್ಕೆ, ಪಕ್ಷಕ್ಕಲ್ಲಎಂದು ಡಾ.ಜಿ.ಪರಮೇಶ್ವರ್‌ ಹೇಳಿದರು.

ಸಹಕಾರಿ ಸಚಿವ ಕೆ.ಎನ್‌.ರಾಜಣ್ಣ ಎಸ್‌ಪಿಎಂ ಸೇರ್ಪಡೆ ಹಾಗೂ ಶೇ.99ರಷ್ಟು ಅವರಿಗೇ ಟಿಕೆಟ್‌ ಎಂದಿದ್ದಾರಲ್ಲಾ ಎಂಬ ಪ್ರಶ್ನೆಗೆ, ”ಹೌದಾ, ರಾಜಣ್ಣ ಹೇಳಿದರು ಎಂದರೆ ಮುಗೀತಲ್ಲಾ. ನಮ್ಮ ಪಕ್ಷದವರು ಅವರು ಹೇಳಿದರೆ ಅರ್ಥವಿರುತ್ತದೆ” ಎಂದರು.

ಹೈಕಮಾಂಡ್‌ ವಿರುದ್ಧ ರಾಜಣ್ಣ ಅಸಮಾಧಾನ, ನಾವೇನು ಗುಲಾಮರಾ ಎಂಬ ಹೇಳಿಕೆಗೆ ಅವರು ಹೇಳಿದ್ದು ನನಗೆ ಗೊತ್ತಿಲ್ಲ ಎಂದು ಡಾ.ಜಿ.ಪರಮೇಶ್ವರ್‌ ಹೇಳಿದರು.

Leave a Reply

Your email address will not be published. Required fields are marked *