Document

KFI: ಹಳ್ಳಿಯ ಬದುಕಿನ ಕನ್ನಡಿ ಮತ್ತು ರಾಜಕೀಯ ಕುತಂತ್ರದ ಅನಾವರಣ ಈ ಗ್ರಾಮಾಯಣ.

JANATAA24 NEWS DESK 

 

 

KFI: ಹಳ್ಳಿಯ ಬದುಕಿನ ಕನ್ನಡಿ ಮತ್ತು ರಾಜಕೀಯ ಕುತಂತ್ರದ ಅನಾವರಣ ಈ ಗ್ರಾಮಾಯಣ.

Kfi

ನಿರ್ದೇಶಕರು ಟೈಟಲ್ ಮೂಲಕವೇ ಗ್ರಾಮೀಣ ಭಾಗದ ಕಥೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ರಾಮಾಯಣ ಎಂದರೆ ರಾಜಕೀಯ ಅದೇನು ಯಾರಿಗೂ ತಿಳಿಯದ ವಿಷಯವೇನಲ್ಲ..! ರಾಮನು ರಾಜ್ಯ ತೊರೆದು ಕಾಡಿಗೆ ಹೋಗಿದ್ದು, ಕೈಕೆ ಭರತನಿಗೆ ಅದಿಕಾರ ಕೇಳಿದ್ದು ಎಲ್ಲವೂ ರಾಜಕೀಯವೇ..! ಅದೇ ರೀತಿ ಗ್ರಾಮ ಅಥವಾ ಹಳ್ಳಿಯಲ್ಲಿ ಸ್ನೇಹಿತರು, ಒಂದೇ ಊರಿನ ಗ್ರಾಮಸ್ಥರು ಎಲ್ಲರೂ ರಾಜಕಿಯಾ ಕಪಿಮುಷ್ಟಿಗೆ ಸಿಕ್ಕಿರುವುದೇ ಗ್ರಾಮಾಯಣ.

ಕಥೆ ಶುರುವು 

ರೈಲ್ವೆ ಹಳಿಯಲ್ಲಿ ಕುರಿಗಳು ದಾಟುವ ಕ್ಷಣದಲ್ಲಿ ಗೋಣಿ ಚೀಲದಲ್ಲಿ ಸಿಲುಕಿದ್ದ ಒಂದು ಶವ ರೈಲಿಗೆ ಸಿಲುಕಿ ಚೂರಾಗುತ್ತದೆ. ಈ ಅಪಘಾತ ಏಕೆ ನಡೆಯಿತು? ಆ ಶವ ಯಾರದು? ಎಂಬ ಪ್ರಶ್ನೆಯೇ ಚಿತ್ರದ ಜೀವಾಳ. ಆರಂಭದಲ್ಲೇ ಪ್ರೇಕ್ಷಕರ ಕುತೂಹಲವನ್ನು ಕೆರಳಿಸುವ ಈ ಕಥೆ, ಕೊನೆಯವರೆಗೂ ತನ್ನ ರಹಸ್ಯವನ್ನು ಬಿಚ್ಚಿಡದೇ ಸಾಗುತ್ತದೆ.

 

ಅಚ್ಯುತ್ ಕುಮಾರ್ ಅವರ ಹಿನ್ನಲೆ ಧ್ವನಿಯೊಂದಿಗೆ ತೆರೆದುಕೊಳ್ಳುವ ದೇವಪುರ ಗ್ರಾಮದ ಕಥೆ ಕೇವಲ ಒಂದು ಸಸ್ಪೆನ್ಸ್ ಥ್ರಿಲ್ಲರ್ ಅಲ್ಲ. ಅದು ಶಿಕ್ಷಣ, ರಾಜಕೀಯ, ಸಾಮಾಜಿಕ ಅಸಮಾನತೆ, ಬಡತನ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆಯ ವಿರುದ್ಧದ ಗಟ್ಟಿಯಾದ ಧ್ವನಿಯಾಗಿದೆ.

 

ಶಾಲೆಗಾಗಿ ತನ್ನ ಮೂರು ಎಕರೆ ಜಮೀನನ್ನು ದಾನ ಮಾಡಿದ ತಿಮ್ಮಜ್ಜನ ಪಾತ್ರ ಈ ಚಿತ್ರದ ಆತ್ಮ. ಶಿಕ್ಷಣದ ಮಹತ್ವವನ್ನು ಅರಿತು ತನ್ನ ಆಸ್ತಿಯನ್ನೇ ಸಮಾಜಕ್ಕೆ ಅರ್ಪಿಸಿದ ವ್ಯಕ್ತಿಯನ್ನು ಕಾಲಕ್ರಮೇಣ ಅದೇ ಸಮಾಜ ಹೇಗೆ ಮರೆತುಬಿಡುತ್ತದೆ ಎಂಬುದನ್ನು ನಿರ್ದೇಶಕರು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಶಾಲೆಗೆ ಜಮೀನು ಕೊಟ್ಟ ತಿಮ್ಮಜ್ಜ ಬದುಕಿನ ಕೊನೆಯ ದಿನಗಳನ್ನು ಊರಿನ ಆಚೆಯ ಗಾಳಿಗೆ ಬೀಳುವ ಮನೆಯಲ್ಲಿ ತನ್ನ ಮಾನಸಿಕ ಅಸ್ವಸ್ಥ ಮಗನೊಂದಿಗೆ ಕಳೆಯುವುದು ಸಮಾಜದ ಕನ್ನಡಿಯ ಪ್ರತೀಕವಾಗಿ ಕಾಣಿಸುತ್ತದೆ. ಚಿತ್ರದ ಅಂತ್ಯದಲ್ಲಿ ಇದೇ ಮಾನಸಿಕ ಅಸ್ವಸ್ಥ ಮಗ ಕಥೆಯ ಪ್ರಮುಖ ಮುಖವಾಗಿ ಹೊರಹೊಮ್ಮುವುದು ಪ್ರೇಕ್ಷಕರ ಚಿಂತನೆಗೆ ಬಿಟ್ಟಿರುವ ಅಂಶವಾಗಿದೆ.

 

ನಾಯಕ ಸೀನನ ಪಾತ್ರದಲ್ಲಿ ವಿನಯ್ ರಾಜ್‌ಕುಮಾರ್ ಯಾವುದೇ ಅತಿರಂಜಿತ ಬಿಲ್ಡಪ್ ಇಲ್ಲದೆ, ಸರಳ ಗ್ರಾಮೀಣ ಯುವಕನಾಗಿ ಮನಸ್ಸಿಗೆ ಹತ್ತಿರವಾಗುತ್ತಾರೆ. ನಗರ ಜೀವನದ ಓಟದಲ್ಲಿ ತಾನೇ ಕಳೆದುಹೋಗುತ್ತಿರುವುದನ್ನು ಅರಿತು, ಕೃಷಿಯನ್ನೇ ಬದುಕಾಗಿಸಿಕೊಳ್ಳಲು ಹಳ್ಳಿಗೆ ಮರಳುವ ಯುವಕನ ಕನಸುಗಳು, ಅವನ ಹೋರಾಟಗಳು ಮತ್ತು ಕುಟುಂಬದ ಮೇಲಿನ ಜವಾಬ್ದಾರಿಯ ಭಾವನೆ ಸಹಜವಾಗಿ ಮೂಡಿಬಂದಿದೆ. ಸ್ವಂತ ಟ್ರ್ಯಾಕ್ಟರ್ ಖರೀದಿಸಿ ತಂಗಿಯ ಮದುವೆ ಮಾಡುವ ಕನಸು ಈ ಗ್ರಾಮೀಣ ಯುವಕನ ಕನಸಿನ ಪ್ರತಿಬಿಂಬದಂತಿದೆ. ನಂತರ ಟ್ರ್ಯಾಕ್ಟರ್ ಏನಾಗುತ್ತದೆ ಯಾರು ಏನು ಮಾಡಿದರು ನೀವೇ ಸಿನಿಮಾ ನೋಡಿ ಹೇಳಿ?

 

ಕುಸುಮ ಪಾತ್ರದಲ್ಲಿ ಮೇಘಾ ಶೆಟ್ಟಿ ಸಾಮಾನ್ಯ ನಾಯಕಿಯಲ್ಲ. ಅವರು ಗ್ಲಾಮರ್‌ಗೆ ಸೀಮಿತವಾಗದೆ, ಹೊಲದಲ್ಲಿ ದುಡಿಯುವ ರೈತ ಮಹಿಳೆಯಾಗಿ ಮೂಡಿಬಂದಿದ್ದಾರೆ. ಇಂದಿನ ಸಿನೆಮಾಗಳಲ್ಲಿ ನಾಯಕಿಯ ಪಾತ್ರಕ್ಕೆ ನೀಡಲಾಗುವ ಮೇಲ್ಮೈಯ ಸ್ಥಾನಮಾನಕ್ಕಿಂತ ಭಿನ್ನವಾಗಿ(ಹೆಣ್ಣನ್ನು ತಾಯಿಗೆ ಒಲಿಸುವ ಸಮಾಜ, ಸಿನೆಮಾದಲ್ಲಿ ನಾಯಕಿ ನಟಿ ಎಂದರೆ ಅವಶ್ಯಕತೆ ಇಲ್ಲದೆ ಇದ್ದರೂ ಅರೆ ಬರೆ ಬೆತ್ತಲೇ ಮೂಲಕ ತೋರಿಸುವ ನಿರ್ದೇಶಕರ ನಡುವೆ,ರೈತ ಮಹಿಳೆಯಾಗಿ ಆರ್ಟ್ಸ್ ತಗೊಂಡು ಆರಾಮಾಗಿ ಭೂಮಿ ಉಳುತ್ತಾ ನಾಯಕನಿಗೆ ಅವಳ ಮೇಲಾಗುವ ಆಕರ್ಷಣೆಯನ್ನು ತೋರಿಸುತ್ತಾರೆ.)ಕುಸುಮ ಕಥೆಯ ಹೃದಯವಾಗಿ ಬೆಳೆಯುತ್ತಾಳೆ. ಅವಳ ಪ್ರೀತಿ, ಬುದ್ಧಿವಂತಿಕೆ ಮತ್ತು ರಾಜಕೀಯ ತಂತ್ರಗಳನ್ನು ಬಳಸಿಕೊಂಡು ನಾಯಕ ಮತ್ತು ಸ್ನೇಹಿತರನ್ನು ಪೊಲೀಸ್ ಠಾಣೆಯಿಂದ ಬಿಡಿಸುವ ಕ್ರಮ ಪಾತ್ರಕ್ಕೆ ಮತ್ತಷ್ಟು ತೂಕ ನೀಡುತ್ತದೆ.

 

ಮಂಡ್ಯ ಜಿಲ್ಲೆಯಲ್ಲಿ ಐದು ರೂಪಾಯಿಗಳ ಚಿಕಿತ್ಸೆಗಾಗಿ ಜನಪ್ರಿಯರಾಗಿರುವ ವೈದ್ಯರ ಪ್ರೇರಣೆಯಿಂದ ರೂಪುಗೊಂಡ ಡಾ. ಶಂಕರೇಗೌಡ ಪಾತ್ರದಲ್ಲಿ ಅಚ್ಯುತ್ ಕುಮಾರ್ ಎಂದಿನಂತೆ ಕಡಿಮೆ ಅಭಿನಯದಲ್ಲೇ ಆಳವಾದ ಪ್ರಭಾವ ಬೀರುತ್ತಾರೆ. ಅವರ ಪಾತ್ರ ಚಿತ್ರದ ನೈತಿಕ ದಿಕ್ಕು(RTI) ತೋರಿಸುವ ದೀಪದಂತಿದೆ.

 

ಗೋಪಾಲಕೃಷ್ಣ ದೇಶಪಾಂಡೆ ಅಭಿನಯದ ಸದಾನಂದ ಸ್ವಾಮಿ ಹಾಗೂ ಅರುಣ್ ಸಾಗರ್ ನಿರ್ವಹಿಸಿರುವ ಶಾಸಕ ನವೀನ್ ರಾಮಯ್ಯ(ತಲೆ ಕೆಳಗಾಗಿರುವ MLA ತೋರಿಸುತ್ತಾರೆ , ಅಂದರೆ MLA ಸಮಾಜವನ್ನು ಅಭಿವೃದ್ಧಿಯಿಂದ ದೂರ ಇಡುತ್ತಿದ್ದಾನೆ/ಅಭಿವೃದ್ಧಿಯನ್ನು ಬುಡಮೇಲು ಮಾಡಿದ್ದಾನೆ ಎನ್ನುವುದನ್ನು metaphor ಮೂಲಕ ನಿರ್ದೇಶಕರು ತೋರಿಸಿದ್ದಾರೆ ) ಪಾತ್ರಗಳು ಗ್ರಾಮೀಣ ರಾಜಕೀಯದ ಕರಾಳ ಮುಖವನ್ನು ಬಿಚ್ಚಿಡುತ್ತವೆ. ಅಭಿವೃದ್ಧಿಯ ಹೆಸರಿನಲ್ಲಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುವುದು, ಸುಳ್ಳು ದಾಖಲೆ ಸೃಷ್ಟಿಸುವುದು, ಸಾರ್ವಜನಿಕ ಹಣವನ್ನು ದೋಚುವುದು ಹಾಗೂ ಸಂಘಟನೆಗಳನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುವುದು ವಿಗ್ರಹಗಳನ್ನು ಜಾತಿಗೆ ಸೀಮಿತ ಗೊಳಿಸಿ ಅಂಬೇಡ್ಕರ್, ಬಸವಣ್ಣ, ಕುವೆಂಪು,ಕನಕದಾಸರಂತ ಮಹಾನ್ ವ್ಯಕ್ತಿಗಳನ್ನು ಜಾತಿಯ ವಿಗ್ರಹಗಳಾಗಿ ನಿಲ್ಲಿಸುವುದು ಚಿತ್ರದ ಪ್ರಮುಖ ಸಾಮಾಜಿಕ ಹೇಳಿಕೆಯಾಗಿದೆ. ಇನ್ನೂ ನೀರಿಲ್ಲದಿದ್ದರೂ ಜನರು ಮಸೀದಿ, ಚರ್ಚ್, ದೇವಾಲಯ ಕೇಳುವುದು ನಮ್ಮ ಜಾತಿಯ ವೋಟ್ ನಿಮಗೆ ಎನ್ನುವುದು ಸ್ಪಷ್ಟವಾಗಿ ಪ್ರಸ್ತುತ ರಾಜಕೀಯವನ್ನು ತಿಳಿಸುತ್ತದೆ.

 

ಕರಿಬೆಕ್ಕು ಪಾತ್ರದಲ್ಲಿ ಯೋಗಿ ತಮ್ಮ ವಿಭಿನ್ನ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ಕೇಬಲ್ ಟಿವಿ ಜಾಲವನ್ನು ಆಧಾರವಾಗಿಸಿಕೊಂಡು ಗ್ರಾಮದಲ್ಲಿ ಭಯ ಮತ್ತು ಪ್ರಭಾವವನ್ನು ನಿರ್ಮಿಸುವ ಅವರ ಪಾತ್ರ ಕೇವಲ ವ್ಯಕ್ತಿಯಲ್ಲ, ಅದು ಇಂದಿನ ಗೋದಿ ಮೀಡಿಯಾ ವ್ಯವಸ್ಥೆಯ ರೂಪಕವಾಗಿ ಕಾಣುತ್ತದೆ.ಸದಾನಂದ ಸ್ವಾಮಿಯ ಜೊತೆ ಗುರುತಿಸಿಕೊಂಡಿರುವ ಈ ಪಾತ್ರ,ಕೊಲೆಗಾರನಾಗಿ ತನ್ನ ಮೊದಲ ಕೊಲೆ ಬಾವಿಯಲ್ಲಿ ವ್ಯಕ್ತಿಯನ್ನು ಸಾಯಿಸುವ ಮೂಲಕ ಅವನ ಆರಂಭ ಶುರುವಾಗುತ್ತದೆ.

 

ಚಿತ್ರದಲ್ಲಿ ಕೇವಲ ರಾಜಕೀಯವಲ್ಲ, ಬದುಕಿನ ನೋವುಗಳೂ ಇವೆ. ರೈಲಿನಲ್ಲಿ ಬಸ್ಸಿನಲ್ಲಿ ಪ್ರಯಾಣಿಸುವಾಗ ತಾಯಿಯ ಮಡಿಲಿನಂತೆ ಭಾಸವಾಗುತ್ತದೆ ಎಂದು ಹೇಳುವ ನಾಯಕನ ಸ್ನೇಹಿತ, ನಿದ್ದೆಗೆ ಜಾರಿದ ಪರಿಣಾಮ ಬಿದ್ದು ಸಾವಿಗೀಡಾಗುವ ದೃಶ್ಯ ಮನಸ್ಸನ್ನು ಕಲಕುತ್ತದೆ. ಬ್ಯಾಗ್ ನಲ್ಲಿ ಇದ್ದ ಹಣವನ್ನು ಪೊಲೀಸರು ವೈದ್ಯರು ಹಗಲೇ ಕದೀಯುವ ವ್ಯವಸ್ಥೆ. ಆ ಘಟನೆಯ ನಂತರ ಆರಂಭವಾಗುವ ತಂಗಿಯ ಮದುವೆಗಾಗಿ ನಡೆಯುವ ಕಳ್ಳತನ, ಅದರಿಂದ ಹುಟ್ಟುವ ಅಪರಾಧ ಜೀವನ, ಪೊಲೀಸ್ ಠಾಣೆಯಲ್ಲಿನ ಅಮಾನವೀಯ ಹಿಂಸೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಸಮಾಜದ ಮತ್ತೊಂದು ಕತ್ತಲೆಯ ಮುಖವನ್ನು ತೆರೆದಿಡುತ್ತದೆ.

 

ಚಿತ್ರದ ಪ್ರಮುಖ ಶಕ್ತಿಯೇ ಅದರ ಸಾಮಾಜಿಕ ಪ್ರಶ್ನೆಗಳು. ಶಿಕ್ಷಣಕ್ಕಾಗಿ ಜಮೀನು ದಾನ ಮಾಡಿದ ವ್ಯಕ್ತಿಯನ್ನು ಮರೆತು ದೇವಾಲಯಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಮಾಜ, ಕುಡಿಯುವ ನೀರಿನ ಬಾವಿಗಳನ್ನು ನಿರ್ಲಕ್ಷಿಸುವ ಮನಸ್ಥಿತಿ, ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಮಹಾನ್ ಚಿಂತಕರನ್ನು ವಿಭಜಿಸುವ ರಾಜಕೀಯ, ಸಂಘಟನೆಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಪ್ರವೃತ್ತಿ ಇವೆಲ್ಲವನ್ನು ನಿರ್ದೇಶಕರು ನಿರ್ದಾಕ್ಷಿಣ್ಯವಾಗಿ ಪ್ರಶ್ನಿಸಿದ್ದಾರೆ.

 

ಮಾಹಿತಿ ಹಕ್ಕು ಕಾಯ್ದೆ (RTI) ಮೂಲಕ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸಾಮಾನ್ಯ ಯುವಕನ ಕಥೆ ಇದು. ಅವನೊಂದಿಗೆ ನಿಲ್ಲುವ ಫೋಟೋಗ್ರಾಫರ್ ರಮಣಿ, ಐದು ರೂಪಾಯಿಯ ವೈದ್ಯ ಶಂಕರೇಗೌಡ, ಅವನ ಪ್ರೇಯಸಿ ಕುಸುಮ ಹಾಗೂ ಸ್ನೇಹಿತರ ಬಳಗ ಸಮಾಜದಲ್ಲಿ ಇನ್ನೂ ಮಾನವೀಯತೆ ಬದುಕಿದೆ ಎಂಬ ನಂಬಿಕೆಯನ್ನು ಹುಟ್ಟಿಸುತ್ತವೆ.

 

ಒಟ್ಟಾರೆಯಾಗಿ, ‘ಸಿಕ್ಸ್ತ್ ಸೆನ್ಸ್’ ಹೀರೋ ಕೊನೆಯ ಕೊಲೆಯನ್ನು ಆಕ್ಸಿಡೆಂಟ್ ಎಂದು ಬಿಂಬಿಸಲು ರೈಲ್ವೆ ಹಳಿಯ ಮೇಲೆ ಖಳನಾಯಕ ನಾ ಶವವನ್ನು ಇಟ್ಟಿದ್ದಾನೆ ಅದೇ ಕೊನೆ ಮತ್ತು ಮೊದಲ ಸೀನ್. ಇದು ಬರಿ ಕೇವಲ ಕೊಲೆ ರಹಸ್ಯವನ್ನೊಳಗೊಂಡ ಚಿತ್ರವಲ್ಲ. ಮಾನಸಿಕ ಅಸ್ವಸ್ಥ ಕೊಲೆ ಮಾಡಿದರೆ ಅಪರಾಧವಲ್ಲ ಎಂಬ ಸಂದೇಶವನ್ನು ಪ್ರೇಕ್ಷಕರಿಗೆ ಕಾನೂನಿನ ಪಾಠ ಹೇಳುವುದರ ಜೊತೆಗೆ ಪ್ರಶ್ನೆ ಇಟ್ಟಿದ್ದಾರೆ ನಿರ್ದೇಶಕರು. ಇದು ಗ್ರಾಮೀಣ ಭಾರತದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಾಸ್ತವ್ಯಗಳನ್ನು ಕನ್ನಡಿಯಂತೆ ತೋರಿಸುವ ನೈಜ ಚಿತ್ರ. ಶಿಕ್ಷಣದ ಮೌಲ್ಯ, ಮಾನವೀಯತೆ, ಭ್ರಷ್ಟ ರಾಜಕೀಯ, ಬಡತನ, ಪ್ರೀತಿ, ಸ್ನೇಹ ಮತ್ತು ಹೋರಾಟದ ಸಂಗಮವಾಗಿರುವ ಈ ಸಿನಿಮಾ ಮನರಂಜನೆಗಿಂತಲೂ ಹೆಚ್ಚು ಚಿಂತನೆಗೆ ಆಹ್ವಾನ ನೀಡುತ್ತದೆ.

ಜನರು ಶಿಕ್ಷಣಕ್ಕಿಂತ ಧರ್ಮ, ಜಾತಿ ಮತ್ತು ಪ್ರಭಾವಕ್ಕೆ ಹೆಚ್ಚು ಬೆಲೆ ಕೊಡುವ ಕಾಲದಲ್ಲಿ, ತಿಮ್ಮಜ್ಜನ ತ್ಯಾಗದ ಮೂಲಕ ಶಿಕ್ಷಣವೇ ನಿಜವಾದ ಸಮಾಜ ಪರಿವರ್ತನೆಯ ಶಕ್ತಿ ಎಂಬುದನ್ನು ನೆನಪಿಸುವ ಸಿನಿಮಾ ಈ ಗ್ರಾಮಾಯಣ.

ವರದಿ: ದೇವರಾಜು R.

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

https://www.janataa24.com/iasipskas-who-stood-as-the-godfather-of-the/

 

 

https://www.janataa24.com/miscreants-uprooted-40-coconut-trees-turuvekere/

 

 

https://www.janataa24.com/operation-sindor-pok-9-terrorist/

 

Document

Leave a Reply

Your email address will not be published. Required fields are marked *