Janataa24 NEWS DESK
ಗುಬ್ಬಿ: ದ ಸಂ ಸ ಸಮಿತಿಗೆ 50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಫೆ.18ರ ಭಾನುವಾರದಂದು ಬೆಳಗ್ಗೆ 10.30ಕ್ಕೆ ತುಮಕೂರಿನ ಬಾಲಕಿಯರ ಎಂಪ್ರೆಸ್ ಆಡಿಟೋರಿಯಂ ನಲ್ಲಿ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಚೇಳೂರು ಶಿವನಂಜಯ್ಯ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಹೋರಾಟದ ಹಾದಿಯಲ್ಲಿ 50ನೇ ವರ್ಷ ಗಳನ್ನು ಸವೆಸಿ ಇದೀಗ ಸುವರ್ಣ ಮಹೋತ್ಸವ ಘಟ್ಟಕ್ಕೆ ತಲುಪಿರುವುದು ಹೆಮ್ಮೆಯ ವಿಚಾರವಾಗಿದೆ.ಈ ಹೋರಾಟದ ಹಾದಿಯಲ್ಲಿ ಹಲವರು ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಅಂತಹ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದ ಅವರು ದಲಿತ ಸಂಘರ್ಷ ಸಮಿತಿಯ ಎಲ್ಲಾ ಬಣಗಳನ್ನು ಒಗ್ಗೂಡಿಸಿ ಅದ್ದೂರಿ ಕಾರ್ಯಕ್ರಮ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಹಕಾರ ಸಚಿವ ಕೆ ಎನ್ ರಾಜಣ್ಣ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ, ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಹಾಗೂ ಸಮಿತಿಯ ದ್ಯೆಯೋದ್ದೇಶಕ್ಕೆ ದುಡಿತ ಹಲವು ಗಣ್ಯರು ಆಗಮಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ನಾರಾಯಣ್ ರಾಜ್ ರಚಿಸಿದ ದಲಿತ ಚಳುವಳಿಯ ತಾತ್ವಿಕ ನೆಲೆಗಳು ಪುಸ್ತಕ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ಸಮಾಜವಾದಿಗಳು, ಸಮತಾವಾದಿಗಳು, ಗಾಂಧಿವಾದಿಗಳೊಳಗೆ ಹರಿದು ಹಂಚಿ ಹೋಗಿದ್ದ ದಲಿತ ದಮನಿತರಿಗೆ ಅಂಬೇಡ್ಕರ್ ತತ್ವ ಸಿದ್ದಾಂತ ಅಡಿಯಲ್ಲಿ ಪ್ರತ್ಯೇಕ ವೇದಿಕೆ ಕಲ್ಪಿಸಿ ಸ್ವಂತಿಕೆ ತಂದು ಕೊಟ್ಟದ್ದು ಇದೇ ಸಂಘರ್ಷ ಸಮಿತಿ. ಆತ್ಮ ವಿಮರ್ಶೆಯ ಜೊತೆಗೆ ಡಿ ಎಸ್ ಎಸ್ ಮುಂದಡಿ ಇಟ್ಟರೆ ಸಂಭ್ರಮಕ್ಕೊಂದು ಸಾರ್ಥಕತೆ ಬರುತ್ತದೆ, ಪ್ರೊ. ಬಿ. ಕೃಷ್ಣಪ್ಪ ಅವರು ಹಚ್ಚಿದ ಹೋರಾಟದ ಹಣತೆ ಹಾರದಂತೆ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂಬ ಭಾವನೆ ಸಮಿತಿಯಲ್ಲಿದೆ ಎಂದು ತಿಳಿಸಿದರು.
ಈ ಸುದ್ದಿ ಗೋಷ್ಠಿಯಲ್ಲಿ ನರೇಂದ್ರ ಕುಮಾರ್, ಸುರೇಶ್, ಲಾವಣ್ಯ, ದೊಡ್ಡಯ್ಯ, ಮಧು, ಈಶ್ವರಯ್ಯ, ನರಸಿಯಪ್ಪ, ,ಹೊಸಹಳ್ಳಿ ರವೀಶ್, ನರಸಿಂಹ ಮೂರ್ತಿ ಸೇರಿದಂತೆ ಹಲವು ಪದಾಧಿಕಾರಿಗಳು ಹಾಜರಿದ್ದರು.