
ಕೊಳ್ಳೇಗಾಲ: ಚಿತ್ರರಂಗದ (Cinema Industry) ಬಗ್ಗೆ ಯಾರೋ ಹಗುರವಾಗಿ ಮಾತನಾಡಿದ್ದಾರೆ. ಸಿನಿಮಾವನ್ನು ಶೋಕಿ ಎಂದು ಕರೆದಿದ್ದಾರೆ. ಚಿತ್ರರಂಗ ಶೋಕಿಯ ಕ್ಷೇತ್ರವಲ್ಲ. ಅದು ನನ್ನ ಫ್ಯಾಷನ್. ನಾನು ಇದುವರೆಗೆ ನಟಿಸಿದ ಸಿನಿಮಾಗಳಲ್ಲಿ ಲಾಂಗು, ಮಚ್ಚು ಹಿಡಿದಿಲ್ಲ ಎಂದು ನಟ, ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದ್ದಾರೆ.

ಒಂದು ಸಿನಿಮಾ ಮಾಡಲು ಸಾಕಷ್ಟು ದಿನ ಕಷ್ಟಪಡುತ್ತೇವೆ. ನಾನು ಮುಂದೆಯು ಫ್ಯಾಮಿಲಿ ಸಬ್ಜೆಕ್ಟ್ ಸಿನಿಮಾ ಮಾಡುತ್ತೇನೆ. ಸಮಾಜಕ್ಕೆ ಸಂದೇಶ ಕೊಡುವ ಸಿನಿಮಾ ಮಾಡುತ್ತೇನೆ. ಚಿತ್ರರಂಗ ನನ್ನ ವೃತ್ತಿ, ಅದರ ಬಗ್ಗೆ ಲಘುವಾಗಿ ಮಾತಾಡಬಾರದು. ಎರಡೂವರೆ ಗಂಟೆ ಸಿನಿಮಾ ಮಾಡೋದು ಅಷ್ಟು ಸುಲಭವಲ್ಲ. ಸಿನಿಮಾ ಅನ್ನೋದು ಸಿನಿಮಾ ಅಲ್ಲ. ಸಿನಿಮಾದಲ್ಲಿ ನಟನೆ ಮಾಡೋದು ಒಂದು ಕನಸು. ಡಾ. ರಾಜಕುಮಾರ್, ಅಂಬರೀಶಣ್ಣ ಬಹಳ ಶ್ರಮ ಪಟ್ಟಿದ್ದಾರೆ. ನಮ್ಮ ತಂದೆ ರಾಜಕಾರಣಕ್ಕೆ ಬರುವ ಮೊದಲು ಸಿನಿಮಾ ಡಿಸ್ಟ್ರಿಬ್ಯುಟ್ ಮಾಡುತ್ತಿದ್ದರು ಎಂದು ತಿಳಿಸಿದರು.ಇದೇ ವೇಳೆ ಹಾಸನ ಟಿಕೆಟ್ ವಿಚಾರವಾಗಿ ಎದ್ದಿರುವ ಗೊಂದಲದ ಬಗ್ಗೆ ಮಾತನಾಡಿದ ಅವರು, ಸಹಜವಾಗಿ ಎಲ್ಲಿ ಪಕ್ಷ ಬಲಿಷ್ಠವಿರುತ್ತದೋ ಅಲ್ಲಿ ಆಕಾಂಕ್ಷಿಗಳು ಜಾಸ್ತಿ ಇರುತ್ತಾರೆ. ಪಕ್ಷದ ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರು ಅದಕ್ಕೆ ತೆರೆ ಎಳೆಯುತ್ತಾರೆ. ಎಲ್ಲಾ ಗೊಂದಲಕ್ಕೂ ಕೂಡ ಶೀಘ್ರವೇ ಬ್ರೇಕ್ ಬೀಳುತ್ತದೆ ಎಂದರು.
ಶಾಸಕ ಪ್ರೀತಂ ಗೌಡ 50 ಸಾವಿರಕ್ಕಿಂತ ಒಂದು ವೋಟ್ ಕಡಿಮೆ ಬಿದ್ದರೂ ಮರುಚುನಾವಣೆಗೆ ಹೋಗುತ್ತೇನೆ ಎಂಬ ಹೇಳಿಕೆಯ ವಿಚಾರವಾಗಿ ಪ್ರತಿಕ್ರಿಯಿಸಿದ ನಿಖಿಲ್, ರಾಜಕಾರಣದಲ್ಲಿ ನಾವು ಎಷ್ಟು ತಲೆತಗ್ಗುತ್ತೇವೆ, ಅಷ್ಟು ಜನ ನಮ್ಮನ್ನು ರಾಜಕೀಯವಾಗಿ ಬೆಳೆಸುತ್ತಾರೆ. ಇಲ್ಲಿ ಅಹಂಕಾರ, ದರ್ಪ ಯಾವುದೂ ವರ್ಕೌಟ್ ಆಗುವುದಿಲ್ಲ. ಸಮಯ ಹತ್ತಿರ ಬಂದಿದೆ. ಜನರು ತೀರ್ಮಾನಿಸುತ್ತಾರೆ ಎಂದು ಶಾಸಕ ಪ್ರೀತಂ ಗೌಡರಿಗೆ ಟಾಂಗ್ ಕೊಟ್ಟರು.

ಸುಮಲತಾ ಅಂಬರೀಶ್ ಕುರಿತು ಮಾತನಾಡಿದ ಅವರು, ನಾನು ಚುನಾವಣೆ ವೇಳೆಯೂ ಕೂಡಾ ಸುಮಲತಾರನ್ನು ತಾಯಿಯೆಂದು ಕರೆದಿದ್ದೇನೆ. ಲೋಕಸಭಾ ಚುನಾವಣೆಗೆ ತಾಯಿ ಎದುರು ನಿಂತಾಗ ನನಗೆ ಅನುಭವವಿರಲಿಲ್ಲ. ಅವತ್ತೂ ತಾಯಿ ಎಂದು ಮತನಾಡಿಸಿದ್ದೇನೆ. ಇವತ್ತೂ ಆ ಪದವನ್ನೇ ಬಳಸುತ್ತೇನೆ. ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು. ನಿಖಿಲ್ ಕುಮಾರಸ್ವಾಮಿ ರಾಜಕಾರಣದಲ್ಲಿ ಇನ್ನೂ ಯುವಕ ಎಂದು ಕಾಂಗ್ರೆಸ್ ಶಾಸಕ ಚೆಲುವರಾಯಸ್ವಾಮಿ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಚೆಲುವಣ್ಣ ಬಹಳ ಅನುಭವಿ ರಾಜಕಾರಣಿ. ಅವರ ಮುಂದೆ ನಾನು ಹುಡುಗನೇ. ಅವರಷ್ಟು ನನಗೆ ಅನುಭವವಿಲ್ಲ. ಈ ಸಲ ಜನರು ತೀರ್ಮಾನಿಸುತ್ತಾರೆ ಎಂದು ನುಡಿದರು.123 ಗುರಿ ಸಾಧಿಸಲು ಕುಮಾರಸ್ವಾಮಿ ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜನರು ಅವಕಾಶ ಮಾಡಿಕೊಟ್ಟಿದ್ದಾರೆ. ಅವರ ಕಾಲದಲ್ಲಿ ಏನು ಅಭಿವೃದ್ಧಿ ಆಗಿದೆ. ಕುಮರಸ್ವಾಮಿ 34 ತಿಂಗಳ ಅವಧಿಯಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಅಂತ ಜನತೆಗೆ ಗೊತ್ತಿದೆ. ಕನ್ನಡಿಗರು ನಮ್ಮ ಕೈ ಹಿಡಿಯುತ್ತಾರೆ ಎಂಬ ನಂಬಿಕೆಯಿದೆ ಎಂದು ಹೇಳಿದರು.