Janataa24 NEWS DESK

ತೆಲಂಗಾಣ: ತೆಲಂಗಾಣ ರಾಜ್ಯದ ಮೊದಲ ಕಾಂಗ್ರೆಸ್ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೈದರಾಬಾದ್ ನಗರದ ಎಲ್ ಬಿ ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆಯಿತು.

ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅವರು ರೇವಂತ್ ರೆಡ್ಡಿ ಅವರಿಗೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ನೇತಾರರು, ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ರಾಷ್ಟ್ರಗಳ ಸಿಎಂಗಳು ಹಾಜರಾಗಿದ್ದರು.
ಬಿಆರ್‌ಎಸ್ ಮುಖ್ಯಸ್ಥ ಕೆಸಿಆರ್, ಎಪಿ ಸಿಎಂ ಜಗನ್, ಮಾಜಿ ಸಿಎಂ ಚಂದ್ರಬಾಬು ನಾಯ್ಡು, ತಮಿಳುನಾಡು ಸಿಎಂ ಸ್ಟಾಲಿನ್ ಮತ್ತು ವಿವಿಧ ಪಕ್ಷಗಳ ಅಧ್ಯಕ್ಷರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆದರೆ ಅವರ್ಯಾರೂ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ರೇವಂತ್ ರೆಡ್ಡಿ ಜೊತೆಗೆ 11 ಮಂದಿ ಶಾಸಕರು, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಉಪ ಮುಖ್ಯಮಂತ್ರಿಯಾಗಿ ಭಟ್ಟಿ ವಿಕ್ರಮಾರ್ಕ, ಸಚಿವರಾಗಿ ಉತ್ತಮ್ ಕುಮಾರ್ ರೆಡ್ಡಿ, ಪೊನ್ನಂ ಪ್ರಭಾಕರ್, ಸೀತಕ್ಕ, ಶ್ರೀಧರ್ ಬಾಬು, ತುಮ್ಮಲ ನಾಗೇಶ್ವರ ರಾವ್, ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ, ಜೂಪಲ್ಲಿ ಕೃಷ್ಣರಾವ್, ಕೊಂಡ ಸುರೇಖಾ, ಕೋಮಟಿರೆಡ್ಡಿ ವೆಂಕಟ ರೆಡ್ಡಿ, ದಾಮೋದರ ರಾಜನರಸಿಂಹ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ರೇವಂತ್ ರೆಡ್ಡಿ ಮೊದಲು ಆರು ಗ್ಯಾರಂಟಿಗಳಿಗೆ ಸಹಿ ಹಾಕಿದ್ದಾರೆ. ಆ ಬಳಿಕ ಚುನಾವಣೆ ವೇಳೆ ದಿವ್ಯಾಂಗ ಯುವತಿಗೆ ಸರ್ಕಾರಿ ಕೆಲಸ ನೀಡುವುದಾಗಿ ಹೇಳಿದ್ದ ಭರವಸೆಯನ್ನು ಈಡೇರಿಸಿದ್ದು, ಆಕೆಗೆ ಕೆಲಸ ಕೊಡಿಸಿ ಕಡತಕ್ಕೆ ಸಹಿ ಹಾಕಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಎರಡು ಭರವಸೆಗಳನ್ನು ರೇವಂತ್ ರೆಡ್ಡಿ ಈಡೇರಿಸಿದ್ದಾರೆ.

ಅಕ್ಟೋಬರ್ 17 ರಂದು ಗಾಂಧಿ ಭವನದಲ್ಲಿ ರೇವಂತ್ ರೆಡ್ಡಿ ಅವರು ಕಾಂಗ್ರೆಸ್ ಸರ್ಕಾರ ಬಂದಾಗ ರಜಿನಿ ಎಂಬ ಅಂಗವಿಕಲ ಯುವತಿಗೆ ಮೊದಲು ಕೆಲಸ ನೀಡುವುದಾಗಿ ಭರವಸೆ ನೀಡಿದ್ದರು. ಎಂ.ಎ. ವರೆಗೂ ಓದಿರುವ ರಜನಿ, ಸರ್ಕಾರಿ ಕೆಲಸ ಇಲ್ಲ, ಯಾವುದೇ ಖಾಸಗಿ ಕಂಪನಿಯೂ ಉದ್ಯೋಗ ನೀಡುತ್ತಿಲ್ಲ ಎಂದು ರೇವಂತ್ ಬಳಿ ದುಃಖ ತೋಡಿಕೊಂಡರು. ಆಕೆಯ ನೋವನ್ನು ಅರ್ಥಮಾಡಿಕೊಂಡು ಮುಖ್ಯಮಂತ್ರಿಯಾಗಿ ಸರ್ಕಾರಿ ನೌಕರಿ ನೀಡುವ ಮೂಲಕ ತಮ್ಮ ಭರವಸೆಯನ್ನು ಈಡೇರಿಸಿದ್ದಾರೆ.
ಚುನಾವಣೆ ಪ್ರಚಾರ ವೇಳೆ ಕೊಟ್ಟ ಮಾತನ್ನು ನೆನಪಿಟ್ಟುಕೊಂಡಿದ್ದ ರೇವಂತ್ ರೆಡ್ಡಿ ಎಲ್ ಬಿ ಸ್ಟೇಡಿಯಂನಲ್ಲಿ ನಡೆಯುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬರುವಂತೆ ರಜನಿ ಅವರಿಗೆ ಆಹ್ವಾನ ಕಳುಹಿಸಿದ್ದರು. ಅವರ ಮಾತಿನಂತೆ ಇಂದು ಮುಖ್ಯಮಂತ್ರಿಯಾಗಿ ಲಾಲ್ ಬಹದ್ದೂರ್ ಸ್ಟೇಡಿಯಂನಲ್ಲಿ ರಜನಿ ಹುದ್ದೆ ನೇಮಕಾತಿ ಕಡತಕ್ಕೆ ರೇವಂತ್ ರೆಡ್ಡಿ ಸಹಿ ಹಾಕಿದ್ದಾರೆ.