Document

ಈರಣ್ಣ ಬೆಂಗಾಲಿ ಅವರ `ಎಲ್ಲೋ ಹುಡುಕಿದೆ’ ವಚನ ಸಂಕಲನ ಲೋಕಾರ್ಪಣೆ.



ವಚನಗಳು ಸಮಾಜದ ಒಳ ಸೂಕ್ಷ್ಮತೆಯ ನೋಟಗಳನ್ನು ತೀಕ್ಷ್ಯವಾಗಿ ಒಳಗೊಂಡಿವೆ: ಡಾ.ಸರ್ವಮಂಗಳ ಸಕ್ತಿ

ರಾಯಚೂರು: ಚಂದ್ರಶೇಖರ್

IMG 20221217 WA0003

ರಾಯಚೂರು: ವಚನಗಳಲ್ಲಿ ಮಾನವೀಯ ಮೌಲ್ಯಗಳ ಸಂಬಂಧಗಳನ್ನು ಹೊಂದಿದ್ದು, ಹನ್ನೆರಡನೇ ಶತಮಾನದ ವಚನಗಳು ಚಿಂತನೆಗೆ ಈಡು ಮಾಡುತ್ತವೆ ಮತ್ತು ಸಮಾಜದ ಒಳ ಸೂಕ್ಷ್ಮತೆಯ ನೋಟಗಳನ್ನು ಒಳಗೊಂಡಿವೆ ಎಂದು ಹಿರಿಯ ಮಹಿಳಾ ಸಾಹಿತಿ, ಡಾ.ಸರ್ವಮಂಗಳ ಸಕ್ರಿ ಹೇಳಿದರು.
ಅವರಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಯುವ ಸಾಹಿತಿ ಈರಣ್ಣ ಬೆಂಗಾಲಿ ಅವರ ‘ಎಲ್ಲೋ ಹುಡುಕಿದೆ’ ವಚನ ಸಂಕಲನವನ್ನು ಲೋಕಾರ್ಪಣೆ ಮಾಡಿ ಮಾತಾಡಿದರು. ಕೃತಿಯಲ್ಲಿನ ವಚನ ಭಾಷೆಯು ಶ್ರೇಷ್ಠತೆಯ ಜೊತೆಗೆ ಕವಿಯ ವಸ್ತು ಭಾಷೆಯ ಪಕ್ವತೆಯನ್ನು ಬಿಂಬಿಸುತ್ತದೆ. ಪುಸ್ತಕದಲ್ಲಿನ ವಚನಗಳು ನಮ್ಮ ಬದುಕನ್ನು ಹಸನಾಗಿಸಿಕೊಳ್ಳುವ ಅರ್ಥಪೂರ್ಣ ಮಾರ್ಗಸೂಚಿಗಳಾಗಿದ್ದು, ಆಧುನಿಕ ಸಮಾಜದ ಓರೆ ಕೋರೆಗಳನ್ನು ವಿಡಂಬಿಸುವುದಲ್ಲದೆ ಅವುಗಳಿಗೆ ವಚನಗಳ ಮೂಲಕ ಪರಿಹಾರವನ್ನು ನೀಡಿದ್ದು, ಅಂದಿನ ಶರಣರು ರಚಿಸಿದ ವಚನಗಳ ಒಳನೋಟಗಳು ಇಲ್ಲಿ ಪ್ರತಿಬಿಂಬಿತವಾಗಿವೆ ಎಂದರು.ಪುಸ್ತಕದಲ್ಲಿ ದಿಟ್ಟತನದ ನೂರೆಂಟು ವಚನಗಳು ಅರ್ಥಪೂರ್ಣವಾಗಿವೆ ಎಂದರು.

r3 11


ಗೌಸ್ ಪೀರಜಾದೆ ಅವರು ಮಾತನಾಡಿ ರಾಯಚೂರಿನಲ್ಲಿ ಅನೇಕರು ಆಧುನಿಕ ವಚನಗಳನ್ನು ಬರೆದು ಹೆಸರು ಮಾಡಿದ್ದಾರೆ. ಅವರ ಸಾಲಿಗೆ ಯುವಸಾಹಿತಿ, ವ್ಯಂಗ್ಯಚಿತ್ರಕಾರರೂ ಆಗಿರುವ ಈರಣ್ಣ ಬೆಂಗಾಲಿ ಅವರು ಸೇರಿಕೊಂಡಿದ್ದು, ಪುಸ್ತಕದ ವಚನಗಳಲ್ಲಿ ಸಾಮಾಜಿಕ ಅಂಶಗಳನ್ನು ಹೆಚ್ಚಾಗಿ ಟೀಕಿಸಿ, ವ್ಯಂಗ್ಯಕ್ತಿಗಳನ್ನು ಬರೆದಿದ್ದಾರೆ. ಉರುಕುಂದಿ ಈರಣ್ಣ ಎಂಬ ಉಗ್ರದೇವರ ಅಂಕಿತನಾಮವಾಗಿರಿಸಿಕೊಂಡು ಸಮಕಾಲೀನ ತಲ್ಲಣಗಳನ್ನು ತಮ್ಮ ವಚನಗಳಲ್ಲಿ ಹೇಳಿದ್ದಾರೆ ಎಂದರು.


ನಂತರ ರಾಯಚೂರು ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೆಂಕಟೇಶ ಬೇವಿನಬೆಂಚಿ ಅವರು ಮಾತನಾಡಿ ತೀಕ್ಷ್ಯ ಸಂವೇದನೆಯ ಬರಹಗಾರರಾದ ಈರಣ್ಣ ಬೆಂಗಾಲಿ ಅವರು ಸಮಾನತೆಯ ತತ್ವದ ಆಧಾರದ ಮೇಲೆ ನೂರೆಂಟು ವಚನಗಳನ್ನು ರಚಿಸಿದ್ದು, ಪ್ರಸ್ತುತ ಸಮಾಜದ ಅವ್ಯವಸ್ಥೆಯ ಕುರಿತು, ಜ್ವಲಂತ ಸಮಸ್ಯೆಗಳ ಬಗ್ಗೆ ನೇರನುಡಿಗಳಿಂದ ಎಲ್ಲರಿಗೂ ತಿಳಿಯುವ ಹಾಗೆ ಬರೆದಿದ್ದಾರೆ ಎಂದು ಹೇಳಿದ್ದಾರೆ.

IMG 20221217 WA0003 1


ಸುರಭಿ ಸಾಂಸ್ಕೃತಿಕ ಬಳಗದ ಅಧ್ಯಕ್ಷರಾದ ಜಿ.ಸುರೇಶ್ ಅವರು ಮಾತನಾಡುತ್ತಾ ವಚನಗಳು ಎಂದರೆ ಹನ್ನೆರಡನೇಯ ಶತಮಾನದ ಬಸವಣ್ಣನ ಕ್ರಾಂತಿಯು ನೆನಪಾಗುತ್ತದೆ. ಶರಣರು ವಚನಗಳನ್ನು ಬರೆಯುವ ಮೂಲಕ ಕ್ರಾಂತಿ ಮಾಡಿರುವುದು ಇತಿಹಾಸ, ಅಂದಿನ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಈರಣ್ಣ ಬೆಂಗಾಲಿ ಅವರ ವಚನಗಳಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಅಸಮಾನತೆ, ಮೋಸ ವಂಚನೆಗಳನ್ನು ಖಂಡಿಸಿದ್ದಾರೆ. ಕೃತಿಯಲ್ಲಿನ ವಚನಗಳು ತುಂಬಾ ಪ್ರಭಾವಶಾಲಿಯಾಗಿವೆ, ಮೊನಚಾಗಿವೆ ಎಂದು ಹೇಳಿದರು.ಕೃತಿಯ ಲೇಖಕರಾದ ಈರಣ್ಣ ಬೆಂಗಾಲಿ ಅವರು ಮಾತನಾಡಿ ವಚನಗಳು ವೈಚಾರಿಕತೆಯನ್ನು ಹೊಂದಿ ಇವು ಜನಸಾಮಾನ್ಯರಿಗೆ ಬಹಳ ಹತ್ತಿರವಾಗಿದ್ದು, ಮಾರ್ಗದರ್ಶಕಗಳಾಗಿವೆ. ಇಂದಿನ ಸಮಾಜದಲ್ಲಿ ಕಂಡುಬರುವ ಅವ್ಯವಸ್ಥೆಯ ವಿಷಯಗಳನ್ನೇ ವಸ್ತುವಾಗಿಸಿಕೊಂಡು ವಚನಗಳನ್ನು ಸರಳ ಭಾಷೆಯಲ್ಲಿ ಬರೆದಿರುವೆ. ಇವುಗಳು ಓದುಗರ ಮನಮುಟ್ಟುತ್ತವೆ ಎಂಬ ಆಶಯವಿದೆ. ವಿಶೇಷವಾಗಿ “ಎಲ್ಲೋ ಹುಡುಕಿದೆ” ವಚನ ಕೃತಿಯನ್ನು ರಾಯಚೂರಿನ ಕನ್ನಡದ ಅಪ್ಪಟ ಅಭಿಮಾನಿ, ಕವಿ, ನಾಟಕಕಾರರು, ಕನ್ನಡ ಹೋರಾಟಗಾರರಾದ ಬಶೀರ ಅಹದ ಹೊಸಮನಿ ಅವರಿಗೆ ಅರ್ಪಣೆ ಮಾಡಿ ಗೌರವ ಸೂಚಿಸಿರುವೆ’ ಎಂದು ಹೇಳಿದರು.

Document

Leave a Reply

Your email address will not be published. Required fields are marked *