Madhugiri: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ದಲಿತ ಮುಖಂಡರು ಸಭೆಯನ್ನು ಬಹಿಷ್ಕರಿಸಿ ದಿಕ್ಕಾರ ಕೂಗುತ್ತಾ ಹೊರ ನಡೆದರು
ಮಧುಗಿರಿ: ಅಬಿದ್
ಮಧುಗಿರಿ: ಮಧುಗಿರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತಹಶೀಲ್ದಾರ್ ಸುರೇಶ್ ಆಚಾರ್ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಗಳ ಕುಂದು ಕೊರತೆ ಕುರಿತು ಸಭೆ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ೧೧ ಗಂಟೆಗೆ ಆರಂಭವಾಗಬೇಕಿದ್ದ ಸಭೆ, ಎರಡು ಗಂಟೆ ತಡವಾಗಿ ಆರಂಭವಾದ್ದರಿಂದ, ಸಮಸ್ಯೆ ತಿಳಿಸಲು ಬಂದಿದ್ದ ದಲಿತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ದಲಿತರ ಸಭೆ ನಡೆಸಲು ಅಧಿಕಾರಿಗಳು ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ, ಕೆಲ ಅಧಿಕಾರಿಗಳು ಸಭೆ ನಡೆಯುವ ಕುರಿತು ಮಾಹಿತಿ ನೀಡುವುದಿಲ್ಲ ಎಂದು ಆರೋಪಿಸಿ ಸಭೆ ಬಹಿಷ್ಕಾರಕ್ಕೆ ಮುಂದಾದರು. ಈ ವೇಳೆ ತಹಶೀಲ್ದಾರ್ ಸುರೇಶ್ ಆಚಾರ್ ಸಭೆ ವಿಳಂಬವಾಗಿದ್ದಕ್ಕೆ ಸಮಜಾಯಿಷಿ ನೀಡಿ, ಮುಖಂಡರ ಮನವೊಲಿಸಿ ಸಭೆಯನ್ನು ಮುಂದುವರೆಸಿದರು.

ಈ ವೇಳೆ ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡ ಎಂ.ವೈ. ಶಿವಕುಮಾರ್ ಮತ್ತು ತೊಂಡೋಟಿ ರಾಮಾಂಜಿ, ಮಧುಗಿರಿ ಪಟ್ಟಣದಲ್ಲಿರುವ ಅಂಗಡಿ ಮಳಿಗೆಗಳನ್ನು ಕಾನೂನು ಬದ್ಧವಾಗಿ ಕಾಲಕಾಲಕ್ಕೆ ಮರುಹರಾಜು ಪ್ರಕ್ರಿಯೆಯ ಮೂಲಕ ಭಾಡಿಗೆಗೆ ನೀಡಬೇಕಿದ್ದು, ಸುಮಾರು ೨೦ ವರ್ಷಗಳಿಂದಲೂ ಮೀಸಲಾತಿ ಪ್ರಕಾರ ಹರಾಜು ಆಗಿರುವುದಿಲ್ಲ. ಈ ವಿಚಾರದಲ್ಲಿ ಹೈಕೋರ್ಟ್ ಅದೇಶ ಕೂಡ ಪಾಲನೆಯಾಗಿಲ್ಲ ಎಂದು ದೂರಿದರು. ಪುರಸಭೆ ಅಧಿಕಾರಿಗಳು ಅಂಗಡಿ ಮಾಲೀಕರೊಂದಿಗೆ ಶಾಮೀಲಾಗಿ ಸಿವಿಲ್ ಕೋರ್ಟ್‌ಗೆ ಹೋಗಿ ತಡೆ ತಂದಿದ್ದಾರೆ. ಕೆಲವು ದಿನ ಮಳಿಗೆಗಳನ್ನು ಬಂದ್ ಮಾಡಿ ಈಗ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಧಿಕಾರಿ ಫಿರೋಜ್ ಅಮೀರ್ ಈ ವಿವಾದ ಹೈಕೋರ್ಟ್‌ನಲ್ಲಿದ್ದು, ನಮಗೆ ಯಾವುದೇ ಅದೇಶ ಬಂದಿಲ್ಲ. ಅದೇಶ ಬರುವುದಕ್ಕೆ ಇನ್ನೂ ೭-೮ ದಿನಗಳು ಬೇಕಾಗಬಹುದು. ಅದೇಶದ ಪ್ರತಿ ನಮಗೆ ತಲುಪಿದ ಕೂಡಲೇ ನಿಯಾಮಾನುಸಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿ ಹರಾಜು ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಂತರ ಮಧುಗಿರಿ ಪುರಸಭಾ ವ್ಯಾಪ್ತಿಯ ಕೊಳಚೆ ಪ್ರದೇಶದ ವಾಸಿಗಳಿಗೆ ರಾಜೀವ್ ಆವಾಜ್ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಹೇಳಿ ವಾಸವಿದ್ದ ಮನೆಗಳನ್ನು ಕೆಡವಿ ಬಡ ನಿರ್ಗತಿಕರು ಬಾಡಿಗೆ ಮನೆಗಳಲ್ಲಿ ವಾಸವಿರುವಂತೆ ತಿಳಿಸಿ ಎರಡು ವರ್ಷವಾದರೂ ಸಹ ಇಲ್ಲಿಯವರೆಗೂ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಿರುವುದಿಲ್ಲ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ದೊಡ್ಡೇರಿ ಕಣಿಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಪುರಸಭಾ ಅಧಿಕಾರಿ, ೪೫೦ ಮನೆಗಳ ನಿರ್ಮಾಣ ಪೂರ್ಣಗೊಂಡಿದ್ದು, ಫಲಾನುಭವಿಗಳಿಗೆ ಹಂಚಿಕೆ ಮಾಡಿದ್ದೇವೆ ಎಂದು ಸಭೆಯಲ್ಲಿ ಹೇಳಿದರು. ಇದಕ್ಕೆ ಆಕ್ರೋಶಗೊಂಡ ದೊಡ್ಡೇರಿ ಕಣಿಮಯ್ಯ ಫಲಾನುಭವಿಗಳಿಗೆ ಮನೆಗಳ ಹಸ್ತಾಂತರವಾಗಿದ್ದರೆ ಕೂಡಲೇ ಪಟ್ಟಿಯನ್ನು ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪುರಸಭಾ ಮುಖ್ಯಧಿಕಾರಿ ಪಿರೋಜ್ ಅಮಿರ್ ದಾಖಲೆಗಳು ಸ್ಥಳದಲ್ಲಿ ಇಲ್ಲ ಎಂದು ಸಮಾಜಾಯಿಷಿ ನೀಡಲು ಪ್ರಯತ್ನಿಸಿದರು. ಇದಕ್ಕೆ ಆಕ್ರೋಶಗೊಂಡ ದಲಿತ ಮುಖಂಡರು ದಲಿತರ ಸಭೆಗಳಿಗೆ ಅಧಿಕಾರಿಗಳು ಸೂಕ್ತ ದಾಖಲೆಗಳೊಂದಿಗೆ ಬರದೇ ನಿರ್ಲಕ್ಷ್ಯದಿಂದ ಬರುತ್ತಾರೆಂದು ಆರೋಪಿಸಿ ಫಲಾನುಭವಿಗಳ ಪಟ್ಟಿಯನ್ನು ಕೂಡಲೇ ತರಿಸಿಕೊಂಡು ಸಭೆಗೆ ಸಲ್ಲಿಸಬೇಕೆಂದು ಒತ್ತಾಯಿಸಿ ಸಭೆಯನ್ನು ಬಹಿಷ್ಕರಿಸಲು ಮುಂದಾದರು.

ಇದೇ ವೇಳೆ ಮಾತನಾಡಿದ ದಲಿತ ಮುಖಂಡ ಸಂಜೀವ ಮೂರ್ತಿ ಇತ್ತೀಚೆಗೆ ಜಾತಿಯ ಕ್ರೌರ್ಯಕ್ಕೆ ಬಲಿಯಾದ ದಲಿತ ಯುವಕ ಪುರುಷೋತ್ತಮ್ ಪ್ರಸಾದ್ ಕುಟುಂಬದವರಿಗೆ ಕಾನೂನು ಬದ್ಧವಾಗಿ ನೀಡಬೇಕಾದ ಪರಿಹಾರ ಸಮಾಜ ಕಲ್ಯಾಣ ಇಲಾಖೆಯಿಂದ ಇನ್ನೂ ನೀಡಿಲ್ಲ ಎಂದು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್ ಅವರು ವರದಿ ಸಿದ್ದಪಡಿಸಿ ಮೇಲಾಧಿಕಾರಿಗಳಿಗೆ ಕಳುಹಿಸಲಾಗಿದ್ದು, ಈಗ ಮೇಲಾಧಿಕಾರಿಗಳ ಅದೇಶಕ್ಕೆ ಕಾಯುತ್ತಿದ್ದೇವೆ ತಮ್ಮಿಂದ ಯಾವುದೇ ಲೋಪವಾಗಿಲ್ಲ ಎಂದು ಹೇಳಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ದೊಡ್ಡೇರಿ ಕಣಿಮಯ್ಯ ಮತ್ತು ದಲಿತ ಮುಖಂಡರು, ಸಭೆಯನ್ನು ಬಹಿಷ್ಕರಿಸಿ ಹೊರ ನಡೆದು ತಾಲ್ಲೂಕು ಪಂಚಾಯಿತಿ ಬಾಗಿಲಿನಲ್ಲಿ ಧರಣಿ ಕೂತು ತಾಲೂಕು ಆಡಳಿತದ ವಿರುದ್ಧ ಧಿಕ್ಕಾರಗಳನ್ನು ಕೂಗತೊಡಗಿದರು. ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸುರೇಶ್ ಆಚಾರ್ ಅವರು ದಲಿತ ಮುಖಂಡರ ಬೇಡಿಕೆಗಳನ್ನು ಈಡೇರಿಸುವುದಾಗಿ ಅಶ್ವಾಸನೆ ನೀಡಿ ಸಭೆ ನಡೆಯಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು.
ಅದಕ್ಕೆ ಒಪ್ಪದ ದಲಿತ ಮುಖಂಡರು ಸ್ಥಳದಲ್ಲಿಯೇ ಪುರುಷೋತ್ತಮ್ ಪ್ರಸಾದ್ ಕುಟುಂಬದವರಿಗೆ ಪರಿಹಾರ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಪುರಸಭೆಯಿಂದ ಮನೆಗಳ ಹಂಚಿಕೆಯಾದ ಫಲಾನುಭವಿಗಳ ಪಟ್ಟಿ ನೀಡಬೇಕು. ಹಾಗೂ ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಹ ಶಿಕ್ಷಕನನ್ನು ಕೂಡಲೇ ಅಮಾನತು ಮಾಡಬೇಕೆಂದು ಒತ್ತಾಯಿಸಿ ತಾಲ್ಲೂಕು ಆಡಳಿತದ ವಿರುದ್ಧ ಧಿಕ್ಕಾರಗಳನ್ನು ಕೂಗತೊಡಗಿದರು. ಕೂಡಲೇ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ಕೆ.ಜಿ. ರಂಗಯ್ಯ ಅವರು ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಿರಾ ತಾಲ್ಲೂಕಿನ ಪದ್ಮಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಕೆ.ಸಿ. ಜೀವನ್ ಪ್ರಕಾಶ್‌ನನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಿ ಅದೇಶಿಸಿದರು. ನಂತರ ತಹಶಿಲ್ದಾರ್ ಅವರು ದಲಿತ ಮುಖಂಡರ ಮನವೊಲಿಸಿ ಸಭೆಯನ್ನು ಮುಂದುವರೆಸಲು ಪ್ರಯತ್ನಿಸಿದರು. ಆದರೆ, ಅದಕ್ಕೆ ಒಪ್ಪದ ದಲಿತ ಮುಖಂಡರು ಬೇರೆ ದಿನ ಕುಂದು ಕೊರತೆ ಸಭೆ ಮುಂದುವರೆಸಲು ಮನವಿ ಮಾಡಿಕೊಂಡರು. ಹಾಗಾಗಿ ಡಿಸೆಂಬರ್ ೨ರಂದು ಕುಂದು ಕೊರತೆ ಸಭೆ ಮುಂದುವರೆಸುವುದಾಗಿ ತಹಶೀಲ್ದಾರ್ ಸುರೇಶ್ ಆಚಾರ್ ಹೇಳಿದರು.

ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್‌ಸ್ಪೆಕ್ಟರ್ ಸರ್ದಾರ್, ದಲಿತ ಮುಖಂಡ ದೊಡ್ಡೇರಿ ಕಣಿಮಯ್ಯ, ಸಿದ್ದಾಪುರ ರಂಗಶಾಮಯ್ಯ ತಂಡೋಟಿ ರಾಮಾಂಜಿನಪ್ಪ ಬೆಲ್ಲದ ಮಡಗು ಭರತ್, ಜೀವಿಕ ಮಂಜುನಾಥ್, ದೊಡ್ಡೇರಿ ಮಹಾಲಿಂಗಯ್ಯ, ಸಣ್ಣರಾಮಯ್ಯ, ಜೀವಿಕ ಚಿಕ್ಕಮ್ಮ, ಮಹಾರಾಜು ಐ.ಡಿ. ಹಳ್ಳಿ ಬಾಲಕೃಷ್ಣ, ಸಿದ್ದಾಪುರ ಸಂಜೀವಯ್ಯ ಕೆ. ಶಿವಣ್ಣ ದೊಡ್ಡೇರಿ, ಸಣ್ಣ ರಾಮಣ್ಣ, ಅಂಜಿನಪ್ಪ, ನಟರಾಜ್, ಕೃಷ್ಣಪ್ಪ, ಜೀವಿಕ ಚಿಕ್ಕಮ್ಮ ಎಲ್ಲಾ ಸಂಘಟನೆಯ ಪದಾಧಿಕಾರಿಗಳು ಇದ್ದರು .