Janataa24 NEWS DESK

ಬೆಂಗಳೂರು: ಬೆಂಗಳೂರಿನ ಬುಕ್ಕಿಂಗ್ ಕೌಂಟರ್ ಮೇಲೆ ನಡೆದ ಸಿಸಿಬಿ ದಾಳಿ (CCB Raid) ನಿನ್ನೆ ತಡರಾತ್ರಿ ಒಂದು ಗಂಟೆಗೆ ಅಂತ್ಯಗೊಂಡಿದೆ. ದಾಳಿ ವೇಳೆ ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಕೋಟಿಗೂ ಹೆಚ್ಚು ಹಣವನ್ನು ವಶಕ್ಕೆ ಪಡೆಯಲಾಗಿದೆ.
ಜಿಎಸ್ಟಿ ಕಟ್ಟದೆ ವಂಚನೆ, ನಿಗದಿ ದರಗಳಿಗಿಂತ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಹಿನ್ನೆಲೆ ರೇಸ್ ಕೋರ್ಸ್ ಬುಕ್ಕಿ ಕೌಂಟರ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಗ್ರಾಹಕರಿಂದ ಅಧಿಕ ಹಣ ಪಡೆದು ಕಡಿಮೆ ಮೊತ್ತದ ಟಿಕೆಟ್ ನೀಡಿ ಸರ್ಕಾರಕ್ಕೆ ವಂಚನೆ ಮಾಡಿರುವ ಆರೋಪದ ಬೆನ್ನಲ್ಲೇ ಈ ದಾಳಿ ನಡೆದಿದೆ
ನಿನ್ನೆ ಮಧ್ಯ ರಾತ್ರಿ 1 ಗಂಟೆಗೆ ಸಿಸಿಬಿ ಅಧಿಕಾರಿಗಳು ದಾಳಿ ಅಂತ್ಯಗೊಳಿಸಿದ್ದು, ದಾಳಿ ವೇಳೆ ಅಂದಾಜು 3 ಕೋಟಿ 47 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಸಿಸಿಬಿ ದಾಳಿಯಲ್ಲಿ ಸಿಕ್ಕವರ ಮೇಲೆ ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದ್ದು, ಸುಮಾರು 60 ಜನರನ್ನು ವಶಕ್ಕೆ ಪಡೆದು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ.
ಜಿಎಸ್ಟಿ ಕಟ್ಟದೆ ವಂಚನೆ ಮಾಡಿದ ಆರೋಪ ಹಿನ್ನೆಲೆ ದಾಳಿ ನಡೆದಿದ್ದು, ಬುಕ್ಕಿಂಗ್ ಕೌಂಟರ್ ಗಳನ್ನು ಸಿಸಿಬಿ ಪೊಲೀಸರು ಲಾಕ್ ಮಾಡಿದ್ದಾರೆ. ಜೊತೆಗೆ ಒಂದೊಂದು ಕೌಂಟರ್ಗೂ ಸಿಬ್ಬಂದಿಗಳಿಂದ ಭದ್ರತೆ ಒದಗಿಸಲಾಗಿದೆ.