ಜೈಪುರ: ದೇಶಕ್ಕೆ ಚಿನ್ನದ ಪದಕ ತಂಡ ಹೆಮ್ಮೆಯ ಹೆಣ್ಣು ಮಗಳೊಬ್ಬರನ್ನು ದೇಶವೇ ನಿರ್ಲಕ್ಷಿಸಿರುವ ಘಟನೆ ವರದಿಯಾಗಿದೆ. ರಾಜಸ್ಥಾನದ ಮೊದಲ ಮಹಿಳಾ ಬಾಡಿಬಿಲ್ಡರ್ ಪ್ರಿಯಾ ಸಿಂಗ್ ದೂರದ ಥಾಯ್ಲೆಂಡ್‌ನಲ್ಲಿ ದೇಶದ ಬಾವುಟ ಹಾರಿಸಿದ್ದಾರೆ. ಆದರೆ, ತನ್ನದೆ ದೇಶದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂದು ಆರೋಪಗಳು ಕೇಳಿ ಬಂದಿವೆ.

ಥಾಯ್ಲೆಂಡ್‌ನ ಪಟ್ಟಾಯದಲ್ಲಿ ನಡೆದ ಅಂತಾರಾಷ್ಟ್ರೀಯ ದೇಹದಾರ್ಢ್ಯ ಚಾಂಪಿಯನ್‌ಶಿಪ್‌ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ್ದ ದಲಿತ ಹೆಣ್ಣು ಮಗಳು ಪ್ರಿಯಾ ಸಿಂಗ್ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ದೇಶ ವಿದೇಶಗಳಲ್ಲಿ ಹಲವು ಸ್ಪರ್ಧೆಗಳಲ್ಲಿ ಪದಕ ಗೆದ್ದಿರುವ ಪ್ರಿಯಾ ಸಿಂಗ್, ಈ ಬಾರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ಅಭಿಮಾನದಿಂದ ದೇಶಕ್ಕೆ ಹಿಂತಿರುಗಿದ ಅವರು ವಿಮಾನ ನಿಲ್ದಾಣದಿಂದ ಒಬ್ಬರೇ ಮನೆಗೆ ಹೋಗುವ ಸ್ಥಿತಿ ಇತ್ತು ಎಂದು ವರದಿಯಾಗಿದೆ.
39 ನೇ ಅಂತರಾಷ್ಟ್ರೀಯ ಮಹಿಳಾ ದೇಹದಾರ್ಢ್ಯ ಸ್ಪರ್ಧೆಯು 17 ಮತ್ತು 18 ನೇ ಡಿಸೆಂಬರ್ 2022 ರಂದು ಥಾಯ್ಲೆಂಡ್‌ನ ಪಟ್ಟಾಯದಲ್ಲಿ ನಡೆಯಿತು. ಇದರಲ್ಲಿ ರಾಜಸ್ಥಾನದ ಮೊದಲ ಮಹಿಳಾ ಬಾಡಿಬಿಲ್ಡರ್ ಪ್ರಿಯಾ ಸಿಂಗ್ ಚಿನ್ನದ ಪದಕ ಮತ್ತು ಪ್ರೋ. ಕಾರ್ಡ್ ಗೆಲ್ಲುವ ಮೂಲಕ ಭಾರತಕ್ಕೆ ಪ್ರಶಸ್ತಿ ತಂದುಕೊಟ್ಟಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದರೂ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮತ್ತು ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರ ಆಕೆಯ ಪ್ರತಿಭೆಯನ್ನು ಗೌರವಿಸಲಿಲ್ಲ ಎಂದು ಪ್ರಿಯಾ ಸಿಂಗ್ ಮತ್ತು ಅವರ ಬೆಂಬಲಿಗರು ವಿಷಾದಿಸಿದ್ದಾರೆ.
ಥಾಯ್ಲೆಂಡ್‌ನಿಂದ ಹಿಂತಿರುಗಿದ ನಂತರವೂ ಪ್ರಿಯಾ ಸಿಂಗ್ ವಿಮಾನ ನಿಲ್ದಾಣದಿಂದ ಮನೆಗೆ ಒಬ್ಬರೇ ಹೋಗಿದ್ದರು. ಅವರನ್ನು ಜಾತೀಯ ಕಾರಣದಿಂದ ನಿರ್ಲಕ್ಷಿಸಲಾಗುತ್ತಿದೆ ಎಂದು ಹಲವು ಮಂದಿ ಆಕೆಯ ಸೋಷಿಯಲ್ ಮೀಡಿಯಾದಲ್ಲಿನ ಸಂದರ್ಶನವನ್ನು ಉಲ್ಲೇಖಿಸಿದ್ದಾರೆ.
ಪ್ರಿಯಾ ಸಿಂಗ್ ಮೂಲತಃ ರಾಜಸ್ಥಾನದ ಬಿಕಾನೇರ್‌ನವರು. ಇವರಿಗೆ ಕೇವಲ 8 ವರ್ಷ ಇರುವಾಗಲೇ ಮದುವೆ ಮಾಡಲಾಗಿತ್ತು. ಬಳಿಕ ಕುಟುಂಬದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರಿಂದ ಕೆಲಸಕ್ಕೆ ಹೋಗಲು ಪ್ರಿಯಾ ನಿರ್ಧರಿಸಿದರು. ಇವರಿಗೆ ಇಬ್ಬರು ಮಕ್ಕಳಿದ್ದು, ಸಾಮಾನ್ಯ ಗ್ರಾಮೀಣ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ಎರಡು ಮಕ್ಕಳ ತಾಯಿಯಾದ ನಂತರ, ಪ್ರಿಯಾ ಸಿಂಗ್ ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆರಂಭದಲ್ಲಿ, ಪ್ರಿಯಾ ಸಿಂಗ್ ಮನೆಯ ಖರ್ಚುಗಳನ್ನು ನಿರ್ವಹಿಸಲು ಜಿಮ್‌ನಲ್ಲಿ ಕೆಲಸವನ್ನು ಪ್ರಾರಂಭಿಸಿದರು. ಇಲ್ಲಿಂದ ಫಿಟ್ನೆಸ್ ಬಗ್ಗೆ ಅವರಲ್ಲಿ ಆಸಕ್ತಿ ಹುಟ್ಟಿತು. ಬಾಡಿ ಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಪ್ರಿಯಾ ಸಿಂಗ್ ರಾಜ್ಯ ಮಟ್ಟದಲ್ಲಿ ಸತತ ಮೂರು ಬಾರಿ ಚಿನ್ನದ ಪದಕ ಗೆದ್ದಿದ್ದಾರೆ.
ಜಿಮ್‌ನಲ್ಲಿ ಹಲವು ಗಂಟೆಗಳ ಕಾಲ ಬೆವರು ಸುರಿಸುವ ಅವರು, ಪತಿ ಮತ್ತು ಮಕ್ಕಳ ಬೆಂಬಲದಿಂದ ಪ್ರಿಯಾ ಸಿಂಗ್ ಜಿಮ್ ಟ್ರೈನರ್ ಕೂಡ ಆಗಿದ್ದಾರೆ. ಅನೇಕ ಯುವತಿಯರಿಗೆ ಮಾದರಿಯಾಗಿದ್ದಾರೆ. ವ್ಯಾಯಾಮ ಮಾಡುವುದರಿಂದ ದೇಹ ಆರೋಗ್ಯವಾಗುವುದಲ್ಲದೆ ರೋಗಗಳೂ ದೂರ ಓಡುತ್ತವೆ ಎನ್ನುತ್ತಾರೆ ಪ್ರಿಯಾ ಸಿಂಗ್.