Document

Japananda Swamy : ಬರಗಾಲದಲ್ಲಿ ಮೂಗು ಪ್ರಾಣಿಗಳ ರಕ್ಷಣೆಗೆ ನಿಂತ ಜಪಾನಂದ ಸ್ವಾಮಿ

Janataa24 NEWS DESK

Japananda Swamy : ಬರಗಾಲದಲ್ಲಿ ಮೂಗು ಪ್ರಾಣಿಗಳ ರಕ್ಷಣೆಗೆ ನಿಂತ ಜಪಾನಂದ ಸ್ವಾಮಿ

Japananda swamy

ಪಾವಗಡ: ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ಭಾಗದ ಅಂಚಿನಲ್ಲಿರುವ ಇರುವ ಅರಣ್ಯದ ಮಧ್ಯೆ ಅಂದರೆ ಕೋಡಿಹಳ್ಳಿ, ಹಾಲಪ್ಪನಪಾಳ್ಯ ಗ್ರಾಮ, ಮಡಕಶಿರಾ ಮಂಡಲ, ಆಂಧ್ರಪ್ರದೇಶದಲ್ಲಿ ಕಳೆದ ಎರಡು ತಿಂಗಳಿನಿಂದ ಬೀಡುಬಿಟ್ಟಿರುವ ಸುಮಾರು 150ಕ್ಕೂ ಮಿಗಿಲಾದ ದೇವರ ಎತ್ತುಗಳು, ಹಸುಗಳು ಹಾಗೂ ಪುಟ್ಟ ಪುಟ್ಟ ಕರುಗಳ ಸ್ಥಿತಿಯನ್ನು ಕಂಡು ಎಂತಹವರಿಗಾದರೂ ಹೃದಯ ಕರಗದೇ ಇರದು.

ಈ ರಾಸುಗಳನ್ನು ಮೇವಿನ ಕೊರತೆಯಿಂದ ದೂರದ ಅಗಳಿ ಹಾಗೂ ರೊಳ್ಳ ಪ್ರದೇಶದ ಗಂಧಕಲ್ಲಹಟ್ಟಿಯಿಂದ ಕಿಲಾರಿಗಳು ಮೇವನ್ನು ಹುಡುಕಿಕೊಂಡು ಇಲ್ಲಿಗೆ ಬಂದು ನೆಲೆಸಿರುತ್ತಾರೆ. ಅವರಿಗೆ ಶ್ರೀರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜೀ ರವರು ಇಂತಹ ನಿತ್ರಾಣದಿಂದ, ಮೇವಿಲ್ಲದೆ ಬಸವಳಿಯುತ್ತಿರುವ ರಾಸುಗಳಿಗೆ, ಗೋವುಗಳಿಗೆ ಮೇವನ್ನು ನೀಡುತ್ತಾರೆಂದು ತಿಳಿದುಬಂದು ಕಳೆದ ವಾರ ಪಾವಗಡಕ್ಕೆ ಬಂದು ಮೇವನ್ನು ಸ್ವೀಕರಿಸಿದ್ದರು. ಇವರ ಸಂಕಷ್ಟಗಳನ್ನು ಆಲಿಸಿದ

ಪೂಜ್ಯ ಸ್ವಾಮಿ ಜಪಾನಂದಜೀ ರವರು ಅವರ ಪ್ರದೇಶಕ್ಕೇ ತೆರಳಿ ಆ ಅರಣ್ಯದಲ್ಲಿ ಭಯಾನಕ ಸ್ಥಿತಿಯಲ್ಲಿ ಬೀಡುಬಿಟ್ಟಿರುವ ರಾಸುಗಳನ್ನು ಸ್ವತಃ ಕಂಡು ತತ್‍ಕ್ಷಣ ಒಂದು ಲೋಡು ಮೇವನ್ನು ಅಲ್ಲಿಯೇ ನೀಡಿ ಆ ಕಿಲಾರಿಗಳೊಂದಿಗೆ ಕೆಲವು ಸಮಯವನ್ನು ಕಳೆದು ಸ್ವತಃ ಅವರೇ ಪುಟ್ಟ ಪುಟ್ಟ ಕರುಗಳಿಗೆ ಹಣ್ಣು ಹಾಗೂ ಮೇವನ್ನು ವಿತರಿಸಿದರು.

ಈ ಗೋವುಗಳ ರಕ್ಷಣೆಯ ಹೊಣೆ ಆಡಳಿತರೂಢ ಅಧಿಕಾರಿಗಳಿಗೆ ಇರಬೇಕಿತ್ತು. ದುರದೃಷ್ಟವಶಾತ್ ಇಡೀ ಆಡಳಿತವೇ ಚುನಾವಣೆಯ ಗುಂಗಿನಲ್ಲಿ ಸಿಲುಕಿ ತಮ್ಮ ಎಲ್ಲ ಜವಾಬ್ಧಾರಿಗಳನ್ನು ಗಾಳಿಗೆ ತೂರಿರುವುದರಿಂದ ನೂರಾರು ಮೈಲಿ ಮೇವನ್ನು ಹುಡುಕಿಕೊಂಡು ಚಡಪಡಿಸುತ್ತಿರುವ ಈ ತೆರನಾದ ಗೋಪಾಲಕರನ್ನು ಕಾಣಬಹುದಾಗಿದೆ.

ಈಗಾಗಲೇ ಚಳ್ಳಕೆರೆ ವಿಭಾಗದಲ್ಲಿ ಸುಮಾರು 40 ಹಟ್ಟಿಗಳಿಗೆ ಮೇವನ್ನು ಉಚಿತವಾಗಿ ವಿತರಿಸುತ್ತಾ ಇದೀಗ ಆಂಧ್ರ ಮತ್ತು ಕರ್ನಾಟಕದ ಗಡಿ ಭಾಗದ ಅರಣ್ಯ ಪ್ರದೇಶಗಳಲ್ಲಿನ ಎರಡು ಹಟ್ಟಿಗಳಿಗೆ ಅಂದರೆ ಸುಮಾರು 300ಕ್ಕೂ ಮಿಗಿಲಾದ ರಾಸುಗಳಿಗೆ ಮೇವನ್ನು ವಿತರಿಸುತ್ತಿದ್ದಾರೆ. ಒಂದು ಸರ್ಕಾರ ಮಾಡಬೇಕಿರುವ ಕೆಲಸ ಸ್ವಾಮಿ ವಿವೇಕಾನಂದರಿಂದ ಪ್ರೇರೇಪಿತರಾಗಿರುವ ಶ್ರೀರಾಮಕೃಷ್ಣ ಸೇವಾಶ್ರಮ ಕಾರ್ಯ ನಡೆಸುತ್ತಿದೆ ಎಂದಲ್ಲಿ ನಿಜಕ್ಕೂ ಆಶ್ಚರ್ಯ ತರುವಂತದ್ದೇ ಸರಿ. ಕಾರಣ,

ಈವರೆಗಿನ ಲೆಕ್ಕದ ಪ್ರಕಾರ ಸರಿಸುಮಾರು 15000ಕ್ಕೂ (ಹದಿನೈದು ಸಾವಿರಕ್ಕೂ) ಮಿಗಿಲಾದ ರಾಸುಗಳನ್ನು, ಪಶುಗಳನ್ನು ಉಳಿಸಿಕೊಳ್ಳಲು ಪ್ರಯತ್ನಪಡುತ್ತಿದೆ ಶ್ರೀರಾಮಕೃಷ್ಣ ಸೇವಾಶ್ರಮ. ಪಾವಗಡ, (Pavagada) ಚಳ್ಳಕೆರೆ, ನಾಯಕನಹಟ್ಟಿ, ಮೊಳಕಾಲ್ಮೂರು, ಚಿತ್ರದುರ್ಗ, ಕೂಡ್ಲಿಗಿ ಮುಂತಾದ ಪ್ರದೇಶಗಳಲ್ಲಿ ಸಂಕಷ್ಟದಿಂದ ನರಳುತ್ತಿರುವ ಮೂಕಜೀವಿಗಳಿಗೆ ಕಾಲಕಾಲಕ್ಕೆ ಮೇವನ್ನು ಒದಗಿಸುತ್ತಿದ್ದಾರೆ ಪೂಜ್ಯ ಸ್ವಾಮಿ ಜಪಾನಂದಜೀ ರವರು.

ಚಳ್ಳಕೆರೆ ವಿಭಾಗದಲ್ಲಂತೂ ಕಳೆದ ಒಂದು ವರ್ಷದಿಂದ ಭೀಕರ ಬರಗಾಲದ ಪರಿಸ್ಥಿತಿಯಲ್ಲಿ ಮೇವನ್ನು ನಿರಂತರವಾಗಿ ವಿತರಿಸುತ್ತಿರುವುದು ಒಂದು ದಾಖಲೆಯೇ ಸರಿ. ಹಲವಾರು ಬಾರಿ ಆಡಳಿತಾರೂಢ ಅಧಿಕಾರಿಗಳಿಗೆ ಪದೇ ಪದೇ ಮನವಿ ಮಾಡಿಕೊಂಡರೂ ಯಾವುದೇ ರೀತಿಯ ಪ್ರತಿಫಲವಿಲ್ಲದೆ ಸೇವಾಶ್ರಮವೇ ಈ ಯೋಜನೆಯನ್ನು ಕೈಗೆತ್ತಿಕೊಂಡಿರುವುದು ಜಗಜ್ಜಾಹೀರ.

ಇಂದು ಸ್ವತಃ ಸ್ವಾಮಿ ಜಪಾನಂದಜೀ ರವರು ಈ ಪ್ರದೇಶಗಳಿಗೆ ಖುದ್ದಾಗಿ ಭೇಟಿಯಿತ್ತು ಆ ಮೂಕ ಪ್ರಾಣಿಗಳ ರೋಧನೆ, ಆಕ್ರಂಧನೆ ಜೊತೆ ಜೊತೆಗೆ ಭೀಕರ ಬಿಸಿಲಿನ ತಾಪ ಈ ನರಕ ಸದೃಶ ಸ್ಥಿತಿಯಲ್ಲಿ ಮೂಕ ಪ್ರಾಣಿಗಳನ್ನು ಕಂಡು ಮರುಗಿದರು. ಪ್ರತಿ ವಾರ ಈ ಪ್ರದೇಶಗಳಿಗೆ ಮೇವನ್ನು ಆಶ್ರಮದ ವತಿಯಿಂದಲೇ ನೀಡುವುದಾಗಿ ಅಲ್ಲಿಯ ಗೋಪಾಲಕರಿಗೆ ತಿಳಿಸಿದರು. ಮೊದಲೇ ಭೀಕರ ಬರಗಾಲ, ಜೊತೆಯಲ್ಲಿ 40 ರಿಂದ 50ಕಿ.ಮೀ. ದೂರ ಮೇವನ್ನು ಸಾಗಿಸುವುದೆಂದರೆ ಸಾವಿರಾರು ರೂಪಾಯಿ ಸಾಗಾಣಿಕೆಗೇ ವೆಚ್ಚವಾಗುತ್ತದೆ.

ಹೀಗಾಗಿ ಸಮರೋಪಾದಿಯಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದಜೀ ರವರು ಹಿಂದೆಂದೂ ಕಾಣದ ಬರ ಪರಿಸ್ಥಿತಿಯಲ್ಲಿ ಗೋ ಸೇವೆಯನ್ನು ಮಾಡುತ್ತಾ ರಾಷ್ಟ್ರದ ಆಸ್ತಿಯೇ ಗೋಸಂಪತ್ತು ಎಂಬುದನ್ನು ಆಧುನಿಕ ಅನಾಗರೀಕರ ಈ ಸಮಾಜದಲ್ಲಿ ಮತ್ತೆ ಜ್ಞಾಪಿಸುವಂತಿತ್ತು ಸ್ವಾಮೀಜಿಯವರ ಕಾರ್ಯಕ್ರಮ. ಇಲ್ಲದಿದ್ದಲ್ಲಿ ಈ ನತದೃಷ್ಟ ಗೋವುಗಳು ಕಸಾಯಿಖಾನೆಗೆ ಸುಲಭವಾಗಿ ಸಾಗಿಸಲ್ಪಡುತ್ತಿತ್ತು ಎಂದಲ್ಲಿ ತಪ್ಪಾಗಲಾರದು.

ಇಲ್ಲಿಯ ಅಂದರೆ ಪ್ರತಿ ದಿನ ಒಂದು ಸಾವಿರಕ್ಕೂ ಮಿಗಿಲಾದ ರೈತಾಪಿ ಹಾಗೂ ಗೋಪಾಲಕರು ಶ್ರೀರಾಮಕೃಷ್ಣ ಸೇವಾಶ್ರಮದ ಈ ಒಂದು ಅತ್ಯದ್ಭುತವಾದ ಮೇವು ವಿತರಣಾ ಕೇಂದ್ರಕ್ಕೆ ಭೇಟಿಯಿತ್ತು ತಮ್ಮ ತಮ್ಮ ರಾಸುಗಳನ್ನು, ಗೋವುಗಳನ್ನು ರಕ್ಷಿಸುತ್ತಿರುವುದು ನಿಜಕ್ಕೂ ಅನಿರ್ವಚನೀಯವಾದದ್ದು.

ಈ ಯೋಜನೆಗಳಿಗೆ ಶ್ರೀಮತಿ ಸುಧಾ ಮೂರ್ತಿ ಹಾಗೂ ಶ್ರೀ ನಾರಾಯಣ ಮೂರ್ತಿ ರವರ ಅತ್ಯಮೂಲ್ಯ ಸಹಕಾರ ಹಾಗೂ ಇನ್ಫೋಸಿಸ್ ಫೌಂಡೇಷನ್ನಿನ ಸಹಕಾರ ನಿಜಕ್ಕೂ ಅತ್ಯಂತ ಮಹತ್ತರವಾದ ಪಾತ್ರ ವಹಿಸುತ್ತಿದೆ ಎಂದು ಪೂಜ್ಯ ಸ್ವಾಮೀಜಿಯವರು ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ.

ವರದಿ: ಇಮ್ರಾನ್ ಉಲ್ಲಾ ಪಾವಗಡ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

M T Krishnappa : ಹೇಮಾವತಿ ಕಚೇರಿ ಮುಂದೆ ಧರಣಿಗೆ ಕಾರ್ಯಕರ್ತರಿಗೆ ಶಾಸಕ ಎಂ ಟಿ ಕೃಷ್ಣಪ್ಪ ಕರೆ.

Document

Leave a Reply

Your email address will not be published. Required fields are marked *