JANATAA24 NEWS DESK
Pavagada: ವ್ಯಕ್ತಿಗೆ ಹಾವು ಕಡಿತ – ಆಂಬುಲೆನ್ಸ್ ಸಿಗದೆ ಪರದಾಡಿದ ಕುಟುಂಬಸ್ಥರು.
ಲಿಂಗದಹಳ್ಳಿ ಸರ್ಕಾರಿ ಆಸ್ಪತ್ರೆ ಮುಂದೆ ಜನಾಕ್ರೋಶ – ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟನೆ

ಪಾವಗಡ: ಪಾವಗಡ ತಾಲ್ಲೂಕಿನ ಲಿಂಗದಹಳ್ಳಿ ವ್ಯಾಪ್ತಿಯ ಪೆನ್ನೊಬೆನಹಳ್ಳಿ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಹಾವು ಕಚ್ಚಿದ ಘಟನೆ ಮಂಗಳವಾರ ಸಂಭವಿಸಿದ್ದು, ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸಿಗದೇ ಕುಟುಂಬಸ್ಥರು ಪರದಾಡಿದ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Pavagada: ಹಾವು ಕಡಿತ – ಚಿಕಿತ್ಸೆಗಾಗಿ ವಿಳಂಬ
ಪೆನ್ನೊಬೆನಹಳ್ಳಿ ಗ್ರಾಮದ ಬಿ. ನರಸರೆಡ್ಡಿ ಅವರಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿದೆ. ಕೂಡಲೇ ಕುಟುಂಬಸ್ಥರು ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರೂ, ಲಿಂಗದಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಇಲ್ಲದ ಕಾರಣ ತೀವ್ರ ಸಂಕಷ್ಟ ಎದುರಾಯಿತು. ಬಳಿಕ ಖಾಸಗಿ ವಾಹನದ ಮೂಲಕ ಅವರನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
3–4 ಗಂಟೆ ತಡ – ಸಿಬ್ಬಂದಿಗಳ ವಿರುದ್ಧ ಆರೋಪ
ಹಾವು ಕಡಿತಗೊಂಡು ಸುಮಾರು 3 ರಿಂದ 4 ಗಂಟೆಗಳಾದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವಿಳಂಬ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ರಕ್ತ ಪರೀಕ್ಷೆ ವರದಿ ಬಂದ ನಂತರವೇ ಮುಂದಿನ ಚಿಕಿತ್ಸೆ ನೀಡುವುದಾಗಿ ವೈದ್ಯರು ತಿಳಿಸಿದ್ದರಿಂದ ಕುಟುಂಬಸ್ಥರು ಮತ್ತು ಸಾರ್ವಜನಿಕರು ಅಸಮಾಧಾನಗೊಂಡರು.
ಆಸ್ಪತ್ರೆಗೆ ಬೀಗ ಜಡಿದು ಆಕ್ರೋಶ
ಆಂಬುಲೆನ್ಸ್ ಕೊರತೆ ಹಾಗೂ ಚಿಕಿತ್ಸೆ ವಿಳಂಬದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಾರ್ವಜನಿಕರು ಲಿಂಗದಹಳ್ಳಿ ಸರ್ಕಾರಿ ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಗ್ರಾಮೀಣ ಭಾಗದಲ್ಲಿ ತುರ್ತು ಆರೋಗ್ಯ ಸೇವೆಗಳ ಕೊರತೆಯ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
ಆಂಬುಲೆನ್ಸ್ ಇಲ್ಲದೆ ಗ್ರಾಮೀಣ ಜನರ ಪರದಾಟ
ಪಾವಗಡ ತಾಲ್ಲೂಕಿನಲ್ಲಿ ಎರಡು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದರೂ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಗದಿರುವುದು ಗಂಭೀರ ಸಮಸ್ಯೆಯಾಗಿದೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ ತುರ್ತು ಪರಿಸ್ಥಿತಿಗಳಲ್ಲಿ ರೋಗಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಆರೋಗ್ಯ ಅಧಿಕಾರಿಗಳ ಸ್ಪಷ್ಟನೆ
ಪಾವಗಡ ಸರ್ಕಾರಿ ಆಸ್ಪತ್ರೆಯ ಅಧಿಕಾರಿಗಳು ಮಾತನಾಡಿ,“108 ಆಂಬುಲೆನ್ಸ್ ನಮ್ಮ ವ್ಯಾಪ್ತಿಗೆ ಬರುತ್ತಿಲ್ಲ. ಸರ್ಕಾರದಿಂದ ಮೂರು ಆಂಬುಲೆನ್ಸ್ ನೀಡಲಾಗಿದೆ. ಅದರಲ್ಲಿ ಎರಡು ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ, ಒಂದು ತಿರುಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಇದೆ. ಲಿಂಗದಹಳ್ಳಿ ಮತ್ತು ವೈ.ಎನ್. ಹೊಸಕೋಟೆಯಲ್ಲಿ ಆಂಬುಲೆನ್ಸ್ ಇದ್ದರೂ ಚಾಲಕರ ಕೊರತೆ ಇದೆ” ಎಂದು ತಿಳಿಸಿದ್ದಾರೆ.
ಪೀಡಿತನ ನೋವು: ಹಾವು ಕಡಿತಕ್ಕೆ ಒಳಗಾದ ಬಿ. ನರಸರೆಡ್ಡಿ ಮಾಧ್ಯಮದೊಂದಿಗೆ ಮಾತನಾಡಿ,
“ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು. ದೂರವಾಣಿ ಮೂಲಕ ಆಂಬುಲೆನ್ಸ್ ಕರೆ ಮಾಡಿದರೂ ಬಾರದರೆ ಜನರಿಗೆ ಏನು ಉಪಯೋಗ? ಇಂತಹ ವ್ಯವಸ್ಥೆ ಮತ್ತೆ ಮರುಕಳಿಸಬಾರದು. ಮೊದಲು ಗ್ರಾಮೀಣ ಭಾಗದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿ ಬಡವರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಮನವಿ ಮಾಡಿದ್ದಾರೆ.
ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವರೇ ಅಧಿಕಾರಿಗಳು?
ಗ್ರಾಮೀಣ ಪ್ರದೇಶಗಳಲ್ಲಿ ತುರ್ತು ಆರೋಗ್ಯ ಸೇವೆ ಬಲಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಆಂಬುಲೆನ್ಸ್ ಹಾಗೂ ಚಾಲಕರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವರೇ ಎಂಬುದನ್ನು ಕಾದುನೋಡಬೇಕಿದೆ.
ವರದಿ: ಇಮ್ರಾನ್ ಉಲ್ಲಾ. ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.