JANATAA24 NEWS DESK
GST: ಹೆಚ್ಚು ಕೊಡುಗೆ, ಕಡಿಮೆ ಹಂಚಿಕೆ– ದಕ್ಷಿಣಕ್ಕೆ ನಡೆಯುತ್ತಿರುವ ಹಣಕಾಸು ಅನ್ಯಾಯ.
ಭಾರತದ ಒಕ್ಕೂಟ ವ್ಯವಸ್ಥೆಯ ಹೃದಯದಲ್ಲಿರುವ ತತ್ವವೇ “ಸಹಕಾರಿ ಫೆಡರಲಿಸಂ”. ಆದರೆ ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರದ ಹಣಕಾಸು ನೀತಿಗಳು ಈ ತತ್ವವನ್ನು ದುರ್ಬಲಗೊಳಿಸುತ್ತಿವೆ ಎಂಬ ಪ್ರಶ್ನೆ ಗಂಭೀರವಾಗಿ ಎದ್ದುಬರುತ್ತಿದೆ. ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ನಡೆಯುತ್ತಿರುವ ಹಣಕಾಸು ತಾರತಮ್ಯ ಕೇವಲ ರಾಜಕೀಯ ವಾಗ್ವಾದವಲ್ಲ, ಅದು ಅಂಕಿ-ಅಂಶಗಳಿಂದಲೇ ಸಾಬೀತಾಗುವ ವಾಸ್ತವ.
GST ಸಂಗ್ರಹ: ದಕ್ಷಿಣದ ಶ್ರಮ, ಕೇಂದ್ರದ ಲಾಭ
ದಕ್ಷಿಣ ಭಾರತದ ಐದು ಪ್ರಮುಖ ರಾಜ್ಯಗಳು ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರಪ್ರದೇಶ ದೇಶದ ಒಟ್ಟು GST ಸಂಗ್ರಹದಲ್ಲಿ ಸುಮಾರು 30–32 ಶೇಕಡಾ ಬಹುಪಾಲು ಪಾಲು ನೀಡುತ್ತಿವೆ. 2025ರ ಡಿಸೆಂಬರ್ ತಿಂಗಳಲ್ಲಿ ಈ ರಾಜ್ಯಗಳಿಂದ ಸುಮಾರು ₹21,500 ಕೋಟಿ GST ಸಂಗ್ರಹವಾಗಿದೆ. ಇದು ದಕ್ಷಿಣ ಭಾರತ ದೇಶದ ಆರ್ಥಿಕತೆಗೆ ಎಷ್ಟು ಮಹತ್ವದ ಕೊಡುಗೆ ನೀಡುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಆದರೆ ಈ ಹಣ ಕೇಂದ್ರ ಹಿಂತಿರುಗಿಸುವಾಗ ಸಮಾನತೆ ಕಾಣಿಸುವುದಿಲ್ಲ.
ಹಂಚಿಕೆಯ ಅಸಮಾನತೆ: ಅಂಕಿ-ಅಂಶಗಳೇ ಸಾಕ್ಷಿ
15ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ, ಐದು ದಕ್ಷಿಣ ರಾಜ್ಯಗಳಿಗೆ ಒಟ್ಟಾಗಿ ಸಿಗುವ ಕೇಂದ್ರ ತೆರಿಗೆ ಹಂಚಿಕೆ ಕೇವಲ 15.8 ಶೇಕಡಾ.

ಇತ್ತ ಉತ್ತರ ಮತ್ತು ಮಧ್ಯ ಭಾರತದ ಕೆಲವು ರಾಜ್ಯಗಳು ಒಟ್ಟಾಗಿ 30 ಶೇಕಡಕ್ಕೂ ಅಧಿಕ ಪಾಲನ್ನು ಪಡೆದುಕೊಳ್ಳುತ್ತಿವೆ.
ಉತ್ತರ ಪ್ರದೇಶಕ್ಕೆ ಸುಮಾರು 17.9 ಶೇಕಡಾ ಹಣಕಾಸು ಹಂಚಿಕೆ ಸಿಗುತ್ತದೆ.ಇದು ದಕ್ಷಿಣ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ತಮಿಳುನಾಡಿಗೆ ಸಿಗುವ ಪಾಲು ಸುಮಾರು 4 ಶೇಕಡಾ ಮಾತ್ರ. ಒಂದು ರಾಜ್ಯಕ್ಕೆ ಸಿಗುವ ಹಣ, ದಕ್ಷಿಣದ ಹಲವಾರು ರಾಜ್ಯಗಳ ಒಟ್ಟುಗೂಡಿಸಿದ ಪಾಲಿಗಿಂತ ಹೆಚ್ಚಾಗಿರುವುದು ಸಮತೋಲನದ ಪ್ರಶ್ನೆಯನ್ನು ಎತ್ತುತ್ತದೆ.
GST ಪರಿಹಾರ ನಿಲ್ಲಿಕೆ: ರಾಜ್ಯಗಳ ಮೇಲೆ ಹೊರೆ
GST ಜಾರಿಗೆ ಬಂದಾಗ ರಾಜ್ಯಗಳಿಗೆ 14 ಶೇಕಡಾ ಆದಾಯ ವೃದ್ಧಿ ಭರವಸೆ ನೀಡಲಾಗಿತ್ತು. ಆದರೆ 2017ರಿಂದ 2022ರವರೆಗೆ ಈ ಪರಿಹಾರ ನೀಡಲಾಯಿತು. ಈ ಅವಧಿಯಲ್ಲಿ ಕರ್ನಾಟಕಕ್ಕೆ ₹54,263 ಕೋಟಿ, ತಮಿಳುನಾಡಿಗೆ ₹30,544 ಕೋಟಿ, ಕೇರಳಕ್ಕೆ ₹20,808 ಕೋಟಿ ಪರಿಹಾರ ಲಭಿಸಿತು.
ಆದರೆ 2022 ನಂತರ GST ಪರಿಹಾರವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದರಿಂದ ದಕ್ಷಿಣ ರಾಜ್ಯಗಳ ಹಣಕಾಸು ಸ್ಥಿತಿಗೆ ಭಾರೀ ಹೊಡೆತ ಬಿದ್ದಿದೆ. ಸಾಲದ ಅವಲಂಬನೆ ಹೆಚ್ಚಾಗಿದ್ದು, ಅಭಿವೃದ್ಧಿ ಯೋಜನೆಗಳು ನಿಧಾನಗತಿಯಾಗುತ್ತಿವೆ.
ವಿಶೇಷ ಪ್ಯಾಕೇಜುಗಳಲ್ಲಿ ಪ್ರಾದೇಶಿಕ ಅಸಮತೋಲನ
ಉತ್ತರ ಭಾರತಕ್ಕೆ ಎಕ್ಸ್‌ಪ್ರೆಸ್ ವೇಗಳು, ಕೈಗಾರಿಕಾ ಕಾರಿಡಾರ್‌ಗಳು, ವಿಶೇಷ ಆರ್ಥಿಕ ಪ್ಯಾಕೇಜುಗಳು ಘೋಷಣೆಯಾಗುತ್ತಿರುವಾಗ, ದಕ್ಷಿಣ ರಾಜ್ಯಗಳ ಪ್ರವಾಹ, ಬರ, ಚಂಡಮಾರುತಗಳಿಗೆ ಸಿಗುವ ಕೇಂದ್ರ ಸಹಾಯ ತೀರಾ ಕಡಿಮೆ ಹಾಗೂ ವಿಳಂಬಿತವಾಗಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಇದು ವಿಪತ್ತು ನಿರ್ವಹಣೆಯಲ್ಲಿಯೂ ಸಮಾನತೆ ಇಲ್ಲದಿರುವುದನ್ನು ಸೂಚಿಸುತ್ತದೆ.
ಜನಸಂಖ್ಯೆ ಮಾನದಂಡ;
ಹಣಕಾಸು ಹಂಚಿಕೆಯಲ್ಲಿ 2011ರ ಜನಗಣತಿಗೆ ಹೆಚ್ಚಿನ ತೂಕ ನೀಡಿರುವುದು ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣ ರಾಜ್ಯಗಳಿಗೆ ನಷ್ಟ ತಂದಿದೆ. ಜನಸಂಖ್ಯೆ ಹೆಚ್ಚಿದ ರಾಜ್ಯಗಳಿಗೆ ಹೆಚ್ಚು ಹಣ, ನಿಯಂತ್ರಿಸಿದ ರಾಜ್ಯಗಳಿಗೆ ಕಡಿಮೆ ಹಣ—ಇದು ದೀರ್ಘಾವಧಿಯಲ್ಲಿ ಅಭಿವೃದ್ಧಿ ಶಿಸ್ತನ್ನು ಹಿಂದುಗಾಣಿಸುವ ಅಪಾಯ ಹೊಂದಿದೆ.
ಫೆಡರಲ್ ವ್ಯವಸ್ಥೆಯ ಮುಂದಿನ ದಾರಿ
ಈ ಎಲ್ಲಾ ಅಸಮತೋಲನಗಳು ಒಂದೇ ಸಂದೇಶ ನೀಡುತ್ತವೆ: ಹಣಕಾಸು ಹಂಚಿಕೆಯ ಸೂತ್ರವನ್ನು ಮರುಪರಿಶೀಲಿಸುವ ಅಗತ್ಯ ತೀವ್ರವಾಗಿದೆ. ಜನಸಂಖ್ಯೆಯ ಜೊತೆಗೆ ಆರ್ಥಿಕ ಕೊಡುಗೆ, ಅಭಿವೃದ್ಧಿ ಸೂಚ್ಯಂಕ ಮತ್ತು ಹಣಕಾಸು ಶಿಸ್ತುಗೂ ಸಮಾನ ಮಹತ್ವ ನೀಡಬೇಕು.
ದಕ್ಷಿಣ ಭಾರತ ತಾನು ನೀಡಿದ ತೆರಿಗೆಗೆ ನ್ಯಾಯ ಕೇಳುತ್ತಿದೆ.
ಹೆಚ್ಚು ತೆರಿಗೆ ಕೊಡುವ ರಾಜ್ಯಗಳಿಗೆ ಕಡಿಮೆ ಹಂಚಿಕೆ ನೀಡುವುದು ದೀರ್ಘಾವಧಿಯಲ್ಲಿ ರಾಷ್ಟ್ರೀಯ ಏಕತೆಗೆ ಹಾನಿಕಾರಕ.
ಸಹಕಾರಿ ಫೆಡರಲಿಸಂ ಉಳಿಯಬೇಕಾದರೆ, ಹಣಕಾಸು ನ್ಯಾಯ ಅನಿವಾರ್ಯ.
ಇದು ದಕ್ಷಿಣದ ರಾಜ್ಯಗಳು ಮತ್ತು ಭಾರತದ ಒಕ್ಕೂಟದ ಭವಿಷ್ಯದ ಪ್ರಶ್ನೆ.
ವರದಿ: ದೇವರಾಜ್ ಆರ್.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.