Janataa24 NEWS DESK

ಕೋಲಾರ: ಸಾಲ ವಸೂಲಿಗೆ ತೆರಳಿದ್ದ ವೇಳೆ ಮಹಿಳೆಯರು ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿ ಬೈಕ್‍ಗೆ ಬೆಂಕಿ ಹಚ್ಚಿದ ಘಟನೆ ಕೋಲಾರದಲ್ಲಿ (Kolar) ಗುರುವಾರ ನಡೆದಿದೆ.
ಸ್ತ್ರೀಶಕ್ತಿ ಸಂಘದ ಸಾಲ ವಸೂಲಾತಿಗೆ ಡಿಸಿಸಿ ಬ್ಯಾಂಕ್ (DCC Bank) ಸಿಬ್ಬಂದಿ ಕೋಲಾರದ ಮುಳಬಾಗಿಲಿನ (Mulabagilu) ಬಿಸ್ನಹಳ್ಳಿ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದಾರೆ. ಅಲ್ಲದೇ ಅಲ್ಲಿದ್ದ ಬೈಕ್‍ಗೆ ಬೆಂಕಿ ಹಚ್ಚಿ ಸಿಬ್ಬಂದಿ ಮತ್ತೆ ಬಂದರೆ ಅವರ ಬೈಕ್‍ಗೂ ಇದೇ ಗತಿ ಆಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಹಿಳೆಯರು ಗೋಕುಂಟೆ ಸೊಸೈಟಿಯಲ್ಲಿ ಸಾಲ ಪಡೆದಿದ್ದರು. ಸಾಲ ವಸೂಲಿಗೆ ಸೊಸೈಟಿ ಸಿಬ್ಬಂದಿ ಜೋಸೆಫ್ ತೆರಳಿದ್ದರು. ಈ ವೇಳೆ ಸಾಲ ಕಟ್ಟೋದಿಲ್ಲ ಮನ್ನಾ ಮಾಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ ಎಂದು ಮಹಿಳೆಯರು ಹೇಳಿದ್ದಾರೆ. ಅಲ್ಲದೇ ಮಹಿಳೆಯರಿಂದ ಸಿಬ್ಬಂದಿಯ ಮೇಲೆ ಹಲ್ಲೆಯ ಯತ್ನ ಕೂಡ ನಡೆದಿದೆ.
ನಿಜವಾಗಿ ಏನಾಯ್ತು ಎಂಬುದರ ಮಾಹಿತಿಯನ್ನು ಮಾಧ್ಯಮಕ್ಕೆ ತಿಳಿಸಿದ ಬ್ಯಾಂಕ್ ಸಿಬ್ಬಂದಿ ಜೋಸೆಫ್. ಸಾಲ ವಸೂಲಿಗೆ ಹೋದಾಗ ಬಹಳ ತೊಂದರೆ ಆಗುತ್ತಿದೆ. ಕಾಂಗ್ರೆಸ್ ನಾಯಕರು ಗ್ಯಾರಂಟಿ ಕಾರ್ಡ್ ಜೊತೆಗೆ ಸ್ತ್ರೀ ಶಕ್ತಿಗಳ ಸಾಲವನ್ನು ಮನ್ನಾ ಮಾಡುತ್ತೇವೆ ಎಂಬ ಸಾಲನ್ನು ಸೇರಿಸಿದ್ದರು. ವಸೂಲಿಗೆ ತೆರಳಿದಾಗ ಮಹಿಳೆಯರು ಸಾಲ ಮನ್ನಾ ಎಂಬ ಘೋಷಣೆಯನ್ನು ತೋರಿಸುತ್ತಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರದ ವೇಳೆ ನಮ್ಮ ಸರ್ಕಾರ ರಚನೆಯಾದ ನಂತರ ಸ್ತ್ರೀಶಕ್ತಿ ಸಂಘದ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದ್ದ ವೀಡಿಯೋವನ್ನು ತೋರಿಸುತ್ತಿದ್ದಾರೆ. ನಮಗೆ ಬಹಳ ಕಷ್ಟವಾಗುತ್ತಿದ್ದು, ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.