JANATAA24 NEWS DESK
CN Halli: ದಲಿತ ಕೇರಿಗಳಲ್ಲಿ ನೇರ ಸಭೆ ನಡೆಸಲು ಮುಖಂಡರಿಂದ ಮನವಿ
ಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಗೆ ಠಾಣಾ ವ್ಯಾಪ್ತಿಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡದವರ ಕುಂದುಕೊರತೆಗಳ ಕುರಿತು ಸಭೆ ನಡೆಯಿತು. ಈ ಸಭೆಯಲ್ಲಿ ಹಲವು ದಲಿತ ಸಂಘಟನೆಗಳ ಮುಖಂಡರು ಹಾಗೂ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿ ತಮ್ಮ ತಮ್ಮ ಸಮುದಾಯದ ಜನರ ಸಮಸ್ಯೆಗಳನ್ನು ಠಾಣಾ ಸಬ್ ಇನ್ಸ್‌ಪೆಕ್ಟರ್ ಶ್ರೀ ಯತೀಶ್ ರವರಿಗೆ ಮನವಿ ಮಾಡಿದರು.
ಸಭೆಯಲ್ಲಿ ಭಾಗವಹಿಸಿದ ಮುಖಂಡರು, ಪ್ರಸ್ತುತ SC/ST ಕುಂದುಕೊರತೆಗಳ ಸಭೆಗಳು ಕಚೇರಿಗಳಲ್ಲಿಯೇ ನಡೆಯುತ್ತಿರುವುದರಿಂದ ದಲಿತ ಸಮುದಾಯದ ನೈಜ ಸಮಸ್ಯೆಗಳು ಬೆಳಕಿಗೆ ಬಾರದೇ ಉಳಿಯುತ್ತಿವೆ ಎಂದು ಅಭಿಪ್ರಾಯಪಟ್ಟರು. ಹೀಗಾಗಿ, ಸಭೆಗಳನ್ನು ನೇರವಾಗಿ ಹಳ್ಳಿಗಳ ದಲಿತ ಕೇರಿಗಳಲ್ಲೇ ಆಯೋಜಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಚರ್ಚೆಯಾದ ಪ್ರಮುಖ ಸಮಸ್ಯೆಗಳು:
ಜಾತಿ ತಾರತಮ್ಯ, ದೇವದಾಸಿ ಪದ್ಧತಿ ಮತ್ತು ಸಾಮಾಜಿಕ ಅಸಮಾನತೆ.
ಶಿಕ್ಷಣದಿಂದ ಹೊರಗುಳಿಯುತ್ತಿರುವ ದಲಿತ ಮಕ್ಕಳು ಹಾಗೂ ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿರುವುದು.
ಹಳ್ಳಿಗಳಲ್ಲಿ ಅಕ್ರಮ ಮದ್ಯ ಹಾಗೂ ಗಾಂಜಾ ಚಟುವಟಿಕೆಗಳ ಹೆಚ್ಚಳ, ದುಶ್ಚಟಗಳಿಗೆ ದಲಿತ ಮಕ್ಕಳು ಬಲಿಯಾಗುತ್ತಿರುವುದು.
ದಲಿತ ಹೆಣ್ಣುಮಕ್ಕಳ ಮೇಲಿನ ಹಿಂಸಾಚಾರ ಮತ್ತು ಪೋಕ್ಸೋ ಪ್ರಕರಣಗಳ ಏರಿಕೆ (ಹೊಸಕೆರೆ ಮತ್ತು ಆಶ್ರಿಹಾಳ್ ಗ್ರಾಮಗಳ ಉದಾಹರಣೆ).
ಮೈಕ್ರೋಫೈನಾನ್ಸ್ ಸಂಸ್ಥೆಗಳ ಸಿಬ್ಬಂದಿಯಿಂದ ದಲಿತ ಕುಟುಂಬಗಳ ಮೇಲೆ ದಬ್ಬಾಳಿಕೆ, ವಾರದ ಬಡ್ಡಿ ಮತ್ತು ಕಿರುಕುಳದ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿರುವುದು.
ಪೊಲೀಸ್ ಇಲಾಖೆಯ ಮೇಲಿನ ಭಯ ಹಾಗೂ ಅವಿಶ್ವಾಸ; ದೂರು ದಾಖಲಿಸುವಲ್ಲಿ ವಿಳಂಬ ಮತ್ತು ರಾಜಿ ಸಂಧಾನದ ಒತ್ತಾಯ.
ಹಳ್ಳಿಗಳಲ್ಲಿ ಗಸ್ತು ವ್ಯವಸ್ಥೆಯ ದುರ್ಬಲತೆ, ಜೂಜು, ಮಟ್ಕಾ, ಈಸ್ಪಿಟ್ ಚಟುವಟಿಕೆಗಳು ಹೆಚ್ಚಾಗಿರುವುದು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕರಾದ ಲಿಂಗದೇವರು ಅವರು “ಈ ಎಲ್ಲ ಸಮಸ್ಯೆಗಳ ಮೂಲ ಜನರೊಂದಿಗೆ ನೇರ ಸಂವಾದ ಮತ್ತು ಅರಿವು ಕೊರತೆಯಲ್ಲಿದೆ. ಹೀಗಾಗಿ ದಲಿತ ಕೇರಿಗಳಲ್ಲೇ ಸಭೆಗಳನ್ನು ನಡೆಸಬೇಕು” ಎಂದು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರು.
ಜೈ ಭೀಮ್ ಛಲವಾದಿ ಮಹಾಸಭಾ ತಾಲ್ಲೂಕು ಸಂಚಾಲಕರಾದ ಆನಂದ್ ಆಶ್ರಿಹಾಳ್ ಅವರು “ಅಸ್ಪೃಶ್ಯತೆ ಆಚರಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ದಲಿತರಿಗೆ ಮುಕ್ತ ಪ್ರವೇಶ ಸಿಗುತ್ತಿಲ್ಲ. ದಲಿತರ ಹಕ್ಕುಗಳ ಕುರಿತು ಸ್ಥಳದಲ್ಲೇ ಸಭೆಗಳು ನಡೆಯಬೇಕು” ಎಂದು ಒತ್ತಾಯಿಸಿದರು.
ಅಗಸರಹಳ್ಳಿ ನರಸಿಂಹಮೂರ್ತಿ ತಾಲ್ಲೂಕು ಸಂಚಾಲಕರಾದ ಅವರು “ಸಭೆಯ ಮಾಹಿತಿ ರಾತ್ರಿ 10:30 ಕ್ಕೆ ನೀಡಲಾಗಿತ್ತು. ಮುಂಚಿತವಾಗಿ ತಿಳಿಸಿದರೆ ಹೆಚ್ಚು ಜನ ಭಾಗವಹಿಸಬಹುದಾಗಿತ್ತು. ಹೀಗಾದರೆ ನಿಜವಾದ ಸಮಸ್ಯೆಗಳನ್ನು ಚರ್ಚಿಸಲು ಸಾಧ್ಯವಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
DSS ತಾಲ್ಲೂಕು ಸಂಚಾಲಕರಾದ ಯರೆಕಟ್ಟೆ ರಮೇಶ್ ಅವರು ಮೈಕ್ರೋಫೈನಾನ್ಸ್ ಸಿಬ್ಬಂದಿಗಳ ದೌರ್ಜನ್ಯವನ್ನು ತೀವ್ರವಾಗಿ ವಿರೋಧಿಸಿ ಹೇಳಿದರು — “ಮೈಕ್ರೋಫೈನಾನ್ಸ್ ಸಂಸ್ಥೆಗಳು RBI ನಿಯಮಗಳನ್ನು ಗಾಳಿಗೆ ತೂರಿ ಮಹಿಳೆಯರ ಮೇಲೆ ಕಿರುಕುಳ, ಅವಮಾನ, ವಾರದ ಬಡ್ಡಿ ಸಂಗ್ರಹವನ್ನು ಮುಂದುವರಿಸುತ್ತಿವೆ. ಧರ್ಮಸ್ಥಳ ಮತ್ತು ಶ್ರೀಶಕ್ತಿ ಸಂಘಗಳು ನಿಯಮ ಪಾಲಿಸಬೇಕು” ಎಂದು ಅವರು ಒತ್ತಾಯಿಸಿದರು.
ಸಭೆಯಲ್ಲಿ ಗುರುಮೂರ್ತಿ (ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ ಉಪಾಧ್ಯಕ್ಷರು), ಆನಂದ್, ಲೋಕೇಶ್, ಲಿಂಗದೇವರು, ಅಗಸರಹಳ್ಳಿ ನರಸಿಂಹಮೂರ್ತಿ, ಬಸವರಾಜು ಹಾಗೂ ಇತರ ಮುಖಂಡರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಭೆಯ ಕೊನೆಯಲ್ಲಿ ಮುಖಂಡರು ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡುತ್ತಾ
“ಪೊಲೀಸರು ಜನರ ರಕ್ಷಕರು, ಸಹೋದರರು ಎನ್ನುವ ಭಾವನೆ ಮೂಡಿಸಲು ದಲಿತ ಕೇರಿಗಳಲ್ಲಿಯೇ ಸಭೆಗಳನ್ನು ನಡೆಸಬೇಕು” ಎಂದು ಅಭಿಪ್ರಾಯಪಟ್ಟರು.
ವರದಿ: ದೇವರಾಜ್ ಚಿಕ್ಕನಾಯಕನಹಳ್ಳಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.