ಸಚಿವ ರಾಮಲಿಂಗಾ ರೆಡ್ಡಿ ಅವರ ಭೇಟಿ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ

Janataa24 NEWS DESK

IMG 20230528 WA0020



“ಪಕ್ಷದ ಅಧ್ಯಕ್ಷನಾಗಿ ನಾನು ಹಾಗೂ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಅವರು ಪಕ್ಷಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ.

ರಾಮಲಿಂಗಾ ರೆಡ್ಡಿ ಅವರು ಸತತವಾಗಿ ಎಂಟು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಅವರ ನಂತರ ನಾನು ಅತಿ ಹೆಚ್ಚು ಬಾರಿ ಗೆದ್ದಿದ್ದೇನೆ. ಅವರು ಹಾಗೂ ನಾನು ಅನೇಕ ವರ್ಷಗಳಿಂದ ಪಕ್ಷ ಕಟ್ಟಿದ್ದೇವೆ. ಅವರು ಸಾಕಷ್ಟು ಬಾರಿ ನೋವು ಅನುಭವಿಸಿದ್ದಾರೆ. ನಮ್ಮನ್ನು ನಂಬಿರುವ ಅನೇಕ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದಿದ್ದಾರೆ. ಅವರ ಬಗ್ಗೆಯೂ ನಾವು ಗಮನಹರಿಸಬೇಕು.

ನಾವು ಬೇರೆ ಪಕ್ಷಕ್ಕೆ ಹೋಗಿದ್ದರೆ ಅನೇಕ ಉನ್ನತ ಸ್ಥಾನ ಅಲಂಕರಿಸಬಹುದಿತ್ತು. ಆದರೂ ನಾವು ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಕ್ಷ ಬಿಟ್ಟು ಹೋಗಿಲ್ಲ. ಪಕ್ಷದ ತೀರ್ಮಾನಕ್ಕೆ ಬದ್ಧವಾಗಿದ್ದೇವೆ.”



ಈ ಸೌಹಾರ್ದಯುತ ಭೇಟಿಯಲ್ಲಿ ನಿಮ್ಮ ಸ್ನೇಹಿತರು (ರಾಮಲಿಂಗಾ ರೆಡ್ಡಿ) ತಮ್ಮ ಬೇಸರ ತೋಡಿಕೊಂಡರೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ ನೋವು ಯಾಕೆ? ಮನುಷ್ಯ ಎಂದ ಮೇಲೆ ಹಿರಿತನ ಎಲ್ಲವೂ ಬರುತ್ತದೆ. ರಾಜಕಾರಣದಲ್ಲಿ ಕೆಲವು ಬಾರಿ ಏನೂ ಮಾಡಲು ಆಗುವುದಿಲ್ಲ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಕೆಲವನ್ನು ಪಡೆಯಲು ಮತ್ತೆ ಕೆಲವನ್ನು ಕಳೆದುಕೊಳ್ಳಬೇಕು. ಪಕ್ಷ ಜನರಿಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳಬೇಕು” ಎಂದು ತಿಳಿಸಿದರು.

ಈಗ ಖಾತೆ ಬದಲಾವಣೆ ಆಗುವುದಿಲ್ಲವೇ ಎಂಬ ಪ್ರಶ್ನೆಗೆ, “ಪಟ್ಟಿ ಯಾರು ನೋಡಿದ್ದಾರೆ? ನನಗೆ ಇನ್ನೂ ಪಟ್ಟಿ ಗೊತ್ತಿಲ್ಲ” ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆ ಟೀಕೆ ಬಗ್ಗೆ ಕೇಳಿದಾಗ, ” ಟೀಕೆ ಮಾಡಲಿ ಆಗ ಮಾತ್ರ ನಮ್ಮ ಯೋಜನೆ ಪ್ರಚಾರ ಆಗುತ್ತದೆ. ಅವರ ದುಃಖ ದುಮ್ಮಾನಗಳಿವೆ. ನಾನು ಬಿಜೆಪಿ ಸ್ನೇಹಿತರಿಗೆ ಹೇಳುವುದು ಒಂದೇ ಅವರು ಮಾತು ಕೊಟ್ಟಿರುವಂತೆ ಎಲ್ಲರ ಖಾತೆಗೆ 15 ಲಕ್ಷ ಹಾಕಲಿ. ಸಂಸತ್ ಚುನಾವಣೆಗೂ ಮುನ್ನ ಅದರ ಬಗ್ಗೆ ಮಾತನಾಡಲಿ. ನಮ್ಮ ಯೋಜನೆ ನಮಗೆ ಬಿಡಿ. ಬಿಜೆಪಿ 2018ರ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ರೈತರಿಗೆ 10 ಗಂಟೆ ವಿದ್ಯುತ್ ನೀಡುತ್ತೇವೆ ಎಂದು ಹೇಳಿದರು. ಅದರ ಬಗ್ಗೆ ಮಾತನಾಡಲಿ. ಆಮೇಲೆ ಆಕ್ರೋಶ, ಧರಣಿ, ಹೋರಾಟ ಮಾಡಲಿ” ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆ ಜಾರಿಗೆ ಮಾನದಂಡ ಇರಬೇಕು ಎಂಬ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ ಮಹಿಳೆಯರಿಗೆ 2 ಸಾವಿರ ನೀಡುವ ಯೋಜನೆಯಲ್ಲಿ ಮನೆಯೊಡತಿ ಎಂದು ನಿಮ್ಮ ಮಡದಿಯನ್ನು ಪರಿಗಣಿಸಬೇಕೆ ಅಥವಾ ತಾಯಿಯನ್ನು ಪರಿಗಣಿಸಬೇಕೆ? ಇದನ್ನು ಯಾರು ನಿರ್ಧರಿಸುತ್ತಾರೆ? ನಾವು ಹೇಳಿದಂತೆ ಯೋಜನೆ ನೀಡುತ್ತೇವೆ. ಕೆಲವು ಮನೆಗಳಲ್ಲಿ ಮಹಿಳೆಯರಿಗೆ ಗೊತ್ತಿಲ್ಲದಂತೆ ಗಂಡಂದಿರು ತಮ್ಮ ಖಾತೆ ವಿವರ ನೀಡುತ್ತಾರೆ. ಹೀಗಾಗಿ ಮನೆ ಯಜಮಾನಿಕೆ ಹಣ ಸಿಗುವಂತೆ ಆಗಬೇಕು. ಜೂನ್ 1ರಂದು ಸಚಿವ ಸಂಪುಟ ಇದೆ. ಎಲ್ಲರಿಗೂ ಮಾಹಿತಿ ನೀಡುವಂತೆ ಹೇಳಿದ್ದೇವೆ. ಈ ಯೋಜನೆ ಜಾರಿ ವಿಚಾರವಾಗಿ ಯಾರಿಗೂ ಆತಂಕ ಬೇಡ. ಹೋರಾಟ ಮಾಡುವವರಿಗೆ ನಾವು ಬೇಡ ಎನ್ನುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಕೇಳಬೇಕು, ನಾವು ಹೇಳಬೇಕು” ಎಂದು ಹೇಳಿದರು.

ಜನರನ್ನು ಎತ್ತಿಕಟ್ಟುವ ಕೆಲಸ ಆಗುತ್ತಿದೆಯೇ ಎಂದು ಕೇಳಿದಾಗ, “ಇದು ರಾಜಕಾರಣ. ಸುದ್ದಿ ವಾಹಿನಿಗಳ ಸಂಖ್ಯೆ ಹಾಗೂ ಸ್ಪರ್ಧೆ ಹೆಚ್ಚಾಗಿದೆ. ನಿಮಗೂ ಸುದ್ದಿ ಬೇಕು. ನೀವು ನಮ್ಮ ಪರವಾಗಿ ಅವರ ಭರವಸೆ ಕೊಟ್ಟಿದ್ದರಲ್ಲಿ ಯಾವುದು ಈಡೇರಿಸಿದ್ದಾರೆ ಹೇಳಿ. ಮಗು ಹುಟ್ಟಿ ಇನ್ನೂ ಹದಿನೈದು ದಿನ ಆಗಿದೆ ಸ್ವಲ್ಪ ಸಮಯ ನೀಡಿ” ಎಂದು ಕೇಳಿದರು.

ಹರಿಪ್ರಸಾದ್ ಅವರ ಅಸಮಾಧಾನದ ಬಗ್ಗೆ ಕೇಳಿದಾಗ, “ಅವರು ನನಗಿಂತ ಹಿರಿಯ ನಾಯಕರು. ಪಕ್ಷ ತನ್ನ ತೀರ್ಮಾನ ಕೈಗೊಂಡಿದೆ. ಎಲ್ಲರಿಗೂ ನೋವು ಇರುತ್ತದೆ. ಅವರಿಗೆ ಅವರದೇ ಆದ ವಿಚಾರಗಳಿವೆ. ಅವರ ಅಭಿಪ್ರಾಯ ಹೇಳಿದ್ದಾರೆ” ಎಂದು ತಿಳಿಸಿದರು.

Leave a Reply

Your email address will not be published. Required fields are marked *